ಬೆಳಗಾವಿ: ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ ಎಂಬ ಪ್ರಕಾಶ್ ಹುಕ್ಕೇರಿ ಹೇಳಿಕೆ ನನಗೆ ಅಚ್ಚರಿ ತಂದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.
ಜಿಲ್ಲೆಯ ಗೋಕಾಕ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿದ್ದು ಬೇರೆ ಪಕ್ಷದ ಪರ ಹೇಳಿಕೆ ಕೊಡೋದು ಎಷ್ಟರ ಮಟ್ಟಿಗೆ ಸರಿ. ಪ್ರಕಾಶ್ ಹುಕ್ಕೇರಿ ಆತ್ಮಾವಲೋಕನ ಮಾಡಿಕೊಳ್ಳೋದು ಮುಖ್ಯ. ಒಂದು ಪಕ್ಷದಲ್ಲಿದ್ದು ಬೇರೆ ಪಕ್ಷದ ಪರ ಹೇಳಿಕೆ ಕೊಡೋದು ಸರಿಯಲ್ಲ. ಪ್ರಕಾಶ್ ಹುಕ್ಕೇರಿ ಕಾಂಗ್ರೆಸ್‌ನಲ್ಲಿ ಎಲ್ಲ ಸ್ಥಾನಗಳನ್ನು ಎಂಜಾಯ್ ಮಾಡಿದ್ದಾರೆ. ಜಿ.ಪಂ. ಸದಸ್ಯನಿಂದ ಹಿಡಿದು, ಎಂಎಲ್‌ಎ, ಎಂಪಿ, ಎಂಎಲ್‌ಸಿ, ಮಂತ್ರಿ ಎಲ್ಲವೂ ಆಗಿದ್ದಾರೆ. ಎಲ್ಲದಕ್ಕೂ ಕಾದು ನೋಡೋಣ ಎಂದರು.
ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ಎಲ್ಲ ಪಕ್ಷಗಳಲ್ಲಿ ಮುಸುಕಿನ ಗುದ್ದಾಟವಿದೆ. ಬಿಜೆಪಿಯಲ್ಲಿಯೂ ನಮಗಿಂತ ಹೆಚ್ಚು ಮುಸುಕಿನ ಗುದ್ದಾಟವಿದೆ. ಒಂದು ಸಮಸ್ಯೆ ಬಗೆಹರಿಸುವಷ್ಟರಲ್ಲಿ ಮತ್ತೊಂದು ಬರುತ್ತದೆ. ಅದಕ್ಕೆ ರಾಜಕೀಯ ಅನ್ನೋದು. ಹೈಕಮಾಂಡ್ ಸಹ ಪ್ರಕಾಶ್ ಹುಕ್ಕೇರಿ ಹೇಳಿಕೆಯನ್ನು ಗಮನಿಸಿದೆ. ಪ್ರಕಾಶ್ ಹುಕ್ಕೇರಿ ವಿರುದ್ಧ ಕ್ರಮ ಕೈಗೊಳ್ಳುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಹೇಳಿದರು.
ಡಿಕೆಶಿ ಸಿಎಂ ಆಗುತ್ತಾರೆ ಎಂದು ಸೌಮ್ಯಾ ರೆಡ್ಡಿ, ಸಿದ್ದರಾಮಯ್ಯ ಸಿಎಂ ಆಗ್ತಾರೆ ಎಂದ ಜಮೀರ್ ಹೇಳಿಕೆಗೆ ಪ್ರತಿಕ್ರಿಯಿಸಿ ಸತೀಶ್ ಜಾರಕಿಹೊಳಿ, ಯಾರು ಏನೇ ಹೇಳಿದರೂ ಅದಕ್ಕೆ ಬೆಲೆಯಿಲ್ಲ. 113 ಶಾಸಕರು ಆಯ್ಕೆಯಾಗಿ ಅವರ ಅಭಿಪ್ರಾಯ ಸಂಗ್ರಹಿಸಿಯೇ ಹೈಕಮಾಂಡ್ ನಿರ್ಧರಿಸುತ್ತದೆ. ಇದು ನಮ್ಮ ಪಕ್ಷದಲ್ಲಿರುವ ವ್ಯವಸ್ಥೆ. ಈಗ ಈ ವಿಷಯ ಅಪ್ರಸ್ತುತ. ಈ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ಯಾರಿದ್ದರೂ ಪಕ್ಷ ಸಂಘಟನೆ ಮಾಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ತರಲು ಪ್ರಯತ್ನ ಮಾಡಬೇಕು. ಅದೊಂದೇ ನಮ್ಮ ಹತ್ತಿರ ಇರುವ ಆಯ್ಕೆ ಎಂದು ತಿಳಿಸಿದರು.