ಬೆಳಗಾವಿ :ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷಕ್ಕೆ ಬರುವುದರಿಂದ ನನಗೆ ಯಾವುದೇ ಅಸಮಾಧಾನ ಇಲ್ಲ. ಮೂರು ದಿನದ ಹಿಂದೆ ಅವರ ಜೊತೆ ಮಾತಾಡಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಇಂದು ಬೆಳಗಾವಿಯ ಅಂಬೇಡ್ಕರ್ ಉದ್ಯಾನವನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಬರುವುದಾಗಿ ಸವದಿ ತಿಳಿಸಿದ್ದಾರೆ. ಪಕ್ಷದ ಸಿದ್ದಾಂತ ಒಪ್ಪಿ ಯಾರೇ ಬಂದರೂ ಸ್ವಾಗತ ಎಂದು ಪದೇ ಪದೇ ಹೇಳಿದ್ದೇವೆ. ಹೀಗಾಗಿ ಸವದಿ ಅವರನ್ನೂ ಸ್ವಾಗತಿಸುತ್ತೇವೆ. ಜಿಲ್ಲೆ ಮತ್ತು ರಾಜ್ಯ ನಾಯಕರ ಜೊತೆ ಸವದಿ ಈಗಾಗಲೇ ಮಾತಾಡಿದ್ದು, ಕಾಂಗ್ರೆಸ್ ಸೇರುವುದರಿಂದ ಖಂಡಿತವಾಗಿಯೂ ಪಕ್ಷಕ್ಕೆ ಲಾಭ ಆಗಲಿದೆ. ಅವರದ್ದೇ ಆದ ಸಮುದಾಯವಿದೆ, ಸಚಿವರಾಗಿ, ಡಿಸಿಎಂ ಆಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಶಾಸಕ ಅನಿಲ ಬೆನಕೆ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರಾ ಎಂಬ ಪ್ರಶ್ನೆಗೆ, ಸಾಕಷ್ಟು ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ. ಯಾರೆಂದು ಬಹಿರಂಗವಾಗಿ ಹೇಳಲು ಆಗೋದಿಲ್ಲ. ಇನ್ನೂ ಕೂಡ ಮಾತುಕತೆ ಹಂತದಲ್ಲಿದ್ದು, ಅವರ ಜೊತೆ ಮಾತುಕತೆ ಸಂಪೂರ್ಣವಾಗಿ ಯಶಸ್ವಿಯಾದ ಬಳಿಕ ಹೆಸರು ಹೇಳಬಹುದು ಎಂದರು.
ಯಾವುದೇ ಸುಳಿವು ನೀಡದೇ ಲಕ್ಷ್ಮಣ ಸವದಿ ಅವರ ಆಪರೇಶನ್ ಮಾಡಿದ್ದೀರಿ ಎಂದು ಕೇಳಿದಾಗ, ಮೂರುನಾಲ್ಕು ದಿನಗಳಿಂದ ನಡೀತಾನೇ ಇತ್ತು, ಅದು ನಮ್ಮಿಂದ ಆಗಿಲ್ಲ. ನ್ಯಾಚುರಲ್ ಆಪರೇಶನ್ ಎಂದು ಹಾಸ್ಯ ಚಟಾಕಿ ಹಾರಿಸಿದರು. ಸವದಿಗೆ ಅಥಣಿ ಕಾಂಗ್ರೆಸ್ ಟಿಕೆಟ್ ನೀಡಿದರೆ ಇನ್ನುಳಿದ ಆಕಾಂಕ್ಷಿಗಳನ್ನು ಯಾವ ರೀತಿ ಮ್ಯಾನೇಜ್ ಮಾಡುತ್ತೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ, ಉಳಿದ ಟಿಕೆಟ್ ಆಕಾಂಕ್ಷಿಗಳ ಜೊತೆ ಮಾತಾಡಿ, ಹೊಂದಾಣಿಕೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.