ಕರ್ನಾಟಕ

karnataka

ETV Bharat / state

ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಬಂದ್ರೆ ಸ್ವಾಗತ: ಸತೀಶ್ ಜಾರಕಿಹೊಳಿ - ಕಾಂಗ್ರೆಸ್ ಅಭ್ಯರ್ಥಿ ಮಹಾವೀರ ಮೋಹಿತೆ

ಬಿಜೆಪಿ ಸಂಪೂರ್ಣವಾಗಿ ಒಡೆದ ಮನೆಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟೀಕಿಸಿದ್ದಾರೆ.

satish-jarakiholi-reaction-on-jagadish-shettar
ಜಗದೀಶ್ ಶೆಟ್ಟರ್ ಕಾಂಗ್ರೆಸ್​ ಪಕ್ಷಕ್ಕೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ

By

Published : Apr 16, 2023, 7:13 PM IST

Updated : Apr 16, 2023, 11:01 PM IST

ಚಿಕ್ಕೋಡಿ (ಬೆಳಗಾವಿ): ಬಿಜೆಪಿ ಪಕ್ಷದಲ್ಲಿ ಯಾವುದೇ ಸಿದ್ಧಾಂತ, ಬದ್ಧತೆ ಇಲ್ಲದೇ ಇರುವುದರಿಂದ ಪಕ್ಷ ಒಡೆದ ಮನೆಯಾಗಿದೆ. ಅಲ್ಲಿಂದ ಅನೇಕ ಮಾಜಿ, ಹಾಲಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಾವೀರ ಮೋಹಿತೆ ಪರ ಪ್ರಚಾರ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಿಜೆಪಿಯಿಂದ ಇನ್ನೂ ಕೆಲವರು ಜೆಡಿಎಸ್​ಗೆ ಹೋಗಿದ್ದಾರೆ. ಪಕ್ಷೇತರರಾಗಿ ನಿಂತಿದ್ದಾರೆ.ಬಿಜೆಪಿ ಈ ಬಾರಿ ಹೀನಾಯವಾಗಿ ಸೋಲುತ್ತದೆ. ಬೆಳಗಾವಿಯಿಂದ ಮತ್ತೆ ಯಾರೂ ಕಾಂಗ್ರೆಸ್ ಪಕ್ಷ ಸೇರುತ್ತಿಲ್ಲ. ಇನ್ಯಾರಾದರೂ ಬರುತ್ತೇನೆ ಎಂದರೆ ನಾವು ಸೇರಿಸಿಕೊಳ್ಳುತ್ತೇವೆ. ಜಗದೀಶ್ ಶೆಟ್ಟರ್ ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಅವರಿಗೆ ಸ್ವಾಗತ ಕೋರುತ್ತೇವೆ ಎಂದು ಹೇಳಿದರು.

ರಾಯಭಾಗ ಕಾಂಗ್ರೆಸ್ ಅಭ್ಯರ್ಥಿ ಮಹಾವೀರ ಮೋಹಿತೆ ಪರವಾಗಿ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಕೆಲವು ಸಲಹೆಗಳನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲಾಗಿದೆ. ಇವತ್ತಿನಿಂದ ಪಕ್ಷದ ಪ್ರಚಾರದ ಕೆಲಸವನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು. ರಾಯಭಾಗದಲ್ಲಿನ ಬಂಡಾಯದ ಕುರಿತು ಪ್ರತಿಕ್ರಿಯಿಸಿ,ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಮಹಾವೀರ ಮೋಹಿತೆ ಸಾಮಾನ್ಯ ಕಾರ್ಯಕರ್ತನಾಗಿ ಹಲವು ವರ್ಷಗಳಿಂದ ಪಕ್ಷಕ್ಕೆ ಕೆಲಸ ಮಾಡಿದ್ದಾರೆ. ಇದರಿಂದಾಗಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂದರು. ಶಂಭು ಕಲ್ಲೋಳಿಕರ ಕಾಂಗ್ರೆಸ್ ಪರವಾಗಿ ಕೆಲಸ ಮಾಡಬೇಕು ಎಂದು ನಾವು ಅವರಲ್ಲಿ ಮನವಿ ಮಾಡುತ್ತೇನೆ. ಕುಡಚಿ ವಿಧಾನಸಭಾ ಕ್ಷೇತ್ರದ ಟಿಕೆಟ್​ ಅನ್ನು ಶಂಭು ಅವರ ಕುಟುಂಬ ಸದಸ್ಯರಿಗೆ ಈಗಾಗಲೇ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ಬಿಜೆಪಿಗೆ ನಷ್ಟ: ಡಾ.ಪ್ರಭಾಕರ ಕೋರೆ

ಬಿಜೆಪಿ ಒಡಕಿನ‌ ಲಾಭದಿಂದ ಕಾಂಗ್ರೆಸ್ 140 ಸೀಟ್ ಗೆಲ್ಲುತ್ತೆ-ಸತೀಶ ಜಾರಕಿಹೊಳಿ‌:ಏನೂ ಗೊಂದಲ ಇಲ್ಲದೇ ಸರಳ ಬಹುಮತ ಪಡೆಯುತ್ತಿದ್ದೇವು. ಈಗ ಬಿಜೆಪಿಯಲ್ಲಿನ ಗೊಂದಲ ಮತ್ತು ಒಡಕಿನ‌‌ ಲಾಭದಿಂದ 140 ಸೀಟ್ ಕ್ರಾಸ್ ಆದರೂ ಅಚ್ಚರಿಯಿಲ್ಲ. ಮೊದಲು 120 ಸೀಟ್ ಗೆಲ್ಲುತ್ತೇವೆ ಎಂದುಕೊಂಡಿದ್ದೇವು, ಈಗ ಈ ಎಲ್ಲ ಬೆಳವಣಿಗೆಗಳಿಂದ ಖಂಡಿತವಾಗಲೂ 20 ಸ್ಥಾನ ಹೆಚ್ಚಿಗೆ ಗೆಲ್ಲುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ಬೆಳಗಾವಿಯ‌ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ರಾಜ್ಯದಲ್ಲಿ ಲಿಂಗಾಯತ ಸಮುದಾಯ‌ ಬಿಜೆಪಿ‌ ಪಕ್ಷದ ಪ್ರಮುಖ‌ ವೋಟ್ ಬ್ಯಾಂಕ್ ಆಗಿತ್ತು. ನಮ್ಮ ನಾಯಕತ್ವ ಬಿಜೆಪಿ‌ ತುಳಿಯುತ್ತಿದೆ ಎಂಬ ಆತಂಕ ಲಿಂಗಾಯತರನ್ನ ಕಾಡಲು ಶುರುವಾಗಿದೆ. ಬಿಜೆಪಿಯಲ್ಲಿ ನಮಗೆ ಸಮಸ್ಯೆಯಿದೆ ಎಂದುಕೊಂಡು ಬಹಳಷ್ಟು ಜನ ಬಿಜೆಪಿ ಬಿಡುತ್ತಿದ್ದಾರೆ ಎಂದರು.

ಲಿಂಗಾಯತರನ್ನು ಯೂಸ್ ಆಂಡ್ ಥ್ರೋ ಮಾಡಿತಾ ಬಿಜೆಪಿ ಎಂಬ ಮಾಧ್ಯಮಗಳ ಪ್ರಶ್ನೆಗೆ 20 ವರ್ಷಗಳಿಂದ ಲಿಂಗಾಯತರನ್ನು ವೋಟ್ ಬ್ಯಾಂಕ್ ಮಾಡಿಕೊಂಡು, ಈಗ ಅವರ ಮುಖಂಡರನ್ನು ತುಳಿಯುವ ಪ್ರಯತ್ನ ಮಾಡುತ್ತಿರುವುದು ಕಣ್ಣಿಗೆ ಕಾಣುತ್ತಿದೆ. ಅದು ಯಡಿಯೂರಪ್ಪ ಅವರನ್ನು ಕೆಳಗಿಳಿಸಿರುವ ಸನ್ನಿವೇಷ, ಈಗ ಬೊಮ್ಮಾಯಿ ಅವರನ್ನು ನಡೆಸಿಕೊಳ್ಳುತ್ತಿರುವುದು. ವಿಶೇಷವಾಗಿ ಚುನಾವಣೆ ಸಮಯದಲ್ಲಿ ಟಿಕೆಟ್ ಕೊಡುವ ವೇಳೆ ಈಶ್ವರಪ್ಪ, ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಸೇರಿ ಬಹಳಷ್ಟು ಮುಖಂಡರನ್ನು ಹೊರಗೆ ಹಾಕಲಾಗಿದೆ. ಇದರಿಂದ ಸಮುದಾಯಕ್ಕೆ ಮತ್ತು ಆ ಮುಖಂಡರಿಗೆ ಮನವರಿಕೆ ಆಗಿ, ಬೇರೆ ಬೇರೆ ಪಕ್ಷ ಸೇರುತ್ತಿದ್ದಾರೆ ಎಂದರು.

ಈಗ ಬಿಜೆಪಿಯಲ್ಲಿ ಲಿಂಗಾಯತ ವೋಟ್ ಬ್ಯಾಂಕ್ ಒಡೆದು ಹೋಗಿದ್ದು ನಿಜ. ಹೀಗಾಗಿ ಅವರೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಒಳ್ಳೆಯದು. ಯಾಕೆಂದರೆ ಸಮಾನತೆ ಇರುವ, ಬಸವಣ್ಣನವರ ಕನಸು ನನಸು ಮಾಡುವ ಪಕ್ಷ ನಮ್ಮದು. ಬಸವಣ್ಣನವರ ತತ್ವದಲ್ಲಿದ್ದೇವೆ ಎಂದು ಹೇಳುತ್ತಾರೆ, ಹೀಗಾಗಿ ನಮ್ಮ ಪಕ್ಷಕ್ಕೆ ಬಂದರೆ ಅವರಿಗೂ ಒಳ್ಳೆಯದು, ಕಾಂಗ್ರೆಸ್ ಪಕ್ಷಕ್ಕೂ‌ ಒಳ್ಳೆಯದು. ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗುತ್ತವೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

Last Updated : Apr 16, 2023, 11:01 PM IST

For All Latest Updates

ABOUT THE AUTHOR

...view details