ಬೆಳಗಾವಿ :ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಿಂದ ಭರ್ಜರಿ ಗೆಲವು ದಾಖಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಸವರಾಜ ಹೊಂಡ್ರಿ ವಿರುದ್ಧ ಸುಮಾರು 50 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಯಮಕನಮರಡಿ ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ. ಈ ಬಾರಿಯೂ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಇವರ ವಿರುದ್ಧ ಬಿಜೆಪಿಯ ಬಸವರಾಜ ಹೊಂಡ್ರಿ ಹಾಗೂ ಜೆಡಿಎಸ್ನಿಂದ ಮಾರುತಿ ಮಲ್ಲಪ್ಪ ಅಷ್ಟಗಿ ಸರ್ಧಿಸಿದ್ದರು. ಜಾರಕಿಹೊಳಿ ಈ ಬಾರಿ 97863 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಹೊಂಡ್ರಿ 41810 ಮತಗಳನ್ನು ಪಡೆದರೆ ಜೆಡಿಎಸ್ ಅಭ್ಯರ್ಥಿ ಮಲ್ಲಪ್ಪ 18912 ಮತಗಳನ್ನು ಪಡೆದಿದ್ದಾರೆ. ಯಮಕನಮರಡಿ ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗಳಿದಿದ್ದ ಸತೀಶ ಜಾರಕಿಹೊಳಿ ಐದನೇ ಬಾರಿ ಗೆದ್ದು ದಾಖಲೆ ಬರೆದಿದ್ದಾರೆ.
ಸರಳ ಸಜ್ಜನಿಕೆ ರಾಜಕಾರಣಿ ಸತೀಶ ಜಾರಕಿಹೊಳಿ : ಜಿಲ್ಲೆಯ ಪ್ರಭಾವಿ ರಾಜಕಾರಣಿ, ಮೌಢ್ಯದ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸುತ್ತಾ ರಾಜ್ಯದಲ್ಲೆ ವಿಶಿಷ್ಟ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸದ್ಯ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ತತ್ವಗಳಲ್ಲಿ ನಂಬಿಕೆ ಇಟ್ಟಿರುವ ಸತೀಶ ಜಾರಕಿಹೊಳಿ ಮಾನವ ಬಂಧುತ್ವ ವೇದಿಕೆ ಮೂಲಕ ರಾಜ್ಯಾದ್ಯಂತ ಸಾಮಾಜಿಕ ಬದಲಾವಣೆಗೆ ಶ್ರಮಿಸುತ್ತಿದ್ದಾರೆ. ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
1962 ಜೂನ್ 1ರಂದು ಕರದಂಟು ನಾಡು ಗೋಕಾಕ್ನಲ್ಲಿ ಲಕ್ಷ್ಮಣರಾವ್ ಮತ್ತು ಭೀಮವ್ವ ದಂಪತಿಗೆ ಜನಿಸಿದ ಸತೀಶ ಜಾರಕಿಹೊಳಿ, ಗೋಕಾಕ್ ಸರ್ಕಾರಿ ಪಿಯು ಕಾಲೇಜಿನಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡಿದರು. ಬಳಿಕ ಜೆಎಸ್ಎಸ್ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದಾರೆ. ಸತೀಶ್ ಮತ್ತು ಶಕುಂತಲಾ ದಂಪತಿ, ಪ್ರಿಯಾಂಕಾ ಮತ್ತು ರಾಹುಲ್ ಎಂಬ ಮಕ್ಕಳನ್ನು ಹೊಂದಿದ್ದಾರೆ. ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ಸತೀಶ ಜಾರಕಿಹೊಳಿ ಅವರು ಹಿಂದುಳಿದ ವರ್ಗದ ಭರವಸೆಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.