ಚಿಕ್ಕೋಡಿ: ಮಹಿಳೆಯೋರ್ವರಿಗೆ ಕಿರುಕುಳ ನೀಡಿದ ಆರೋಪದಡಿ ನೀಡಲಾದ ದೂರಿನ ಮೇರೆಗೆ ಸಂಕೇಶ್ವರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನರಸಿಂಹರಾಜು ಜೆ.ಡಿ. ಅವರನ್ನು ಅಮಾನತು ಮಾಡಿ ಬೆಳಗಾವಿ ಜಿಲ್ಲಾ ಎಸ್‌ಪಿ ಭೀಮಾಶಂಕರ ಗುಳೇದ್ ಆದೇಶ ಹೊರಡಿಸಿದ್ದಾರೆ. ನರಸಿಂಹರಾಜು ವಿರುದ್ಧ ಕರ್ತವ್ಯ ಲೋಪ, ಅಶಿಸ್ತು ಹಾಗೂ ದುರ್ನಡತೆಯ ಆರೋಪಗಳಿವೆ.
ಸಂಕೇಶ್ವರ ಪಟ್ಟಣದಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ನರಸಿಂಹರಾಜು, "ನನ್ನ ವಿರುದ್ಧ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಾನು ಮಾಧ್ಯಮಗಳ ಮುಂದೆ ಬಂದಿದ್ದೇನೆ. ಆರೋಪ ಮಾಡಿದ ಮಹಿಳೆ ನಾಲ್ಕು ತಿಂಗಳ ಹಿಂದೆ ಅಕ್ಕಪಕ್ಕದವರ ಜಗಳ ಸಂಬಂಧ ದೂರು ನೀಡಿದ್ದರು. ಈ ವೇಳೆ ಆಕೆಯ ಫೋನ್ ನಂಬರ್ ಪಡೆದು ನನ್ನ ಫೋನ್ ನಂಬರ್ ನೀಡಿದ್ದೆ. ತನ್ನ ಮಗನಿಗೆ ಹೃದಯಸಂಬಂಧಿ ಕಾಯಿಲೆ ಇದೆ ಎಂದು ಸಹಾಯಕ್ಕೆ ಮನವಿ ಮಾಡಿದ್ದರು. ಮಹಿಳೆಗೆ ಸಣ್ಣಪುಟ್ಟ ಹಣದ ಸಹಾಯ ಮಾಡಿದ್ದೆ. ಗೂಗಲ್ ಪೇ ಮಾಡಿ ಹಣ ನೀಡಿದ್ದೆ. ಹುಕ್ಕೇರಿಯಲ್ಲಿ ಚಿನ್ನಾಭರಣ ಖರೀದಿಗೆ ಹಣ ಬೇಕು ವಾಪಸ್ ಕೊಡ್ತೀನಿ ಎಂದು ಪಡೆದಿದ್ದರು. ಈ ಪ್ರಕರಣದಲ್ಲಿ ನಮ್ಮ ಪೊಲೀಸ್ ಸಿಪಿಐ ಹಾಗೂ ಕೆಲವು ಸಿಬ್ಬಂದಿಯ ಷಡ್ಯಂತ್ರವಿದೆ. ಇದೇ ಕಾರಣಕ್ಕೆ ಆ ಮಹಿಳೆ ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ. ಮಹಿಳೆ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿಲ್ಲ. ಸಿಪಿಐ ಶಿವಶರಣ ಹಾಗೂ ಸಿಬ್ಬಂದಿ ಆಕೆಯ ಮನೆಗೆ ಹೋಗಿ ದೂರು ಬರೆಸಿಕೊಂಡು ನೇರವಾಗಿ ಎಸ್ಪಿಗೆ ಕಳುಹಿಸಿಕೊಟ್ಟಿದ್ದಾರೆ. ಯಾವುದೇ ವಿಚಾರವಿಲ್ಲದೆ ಎಸ್‌ಪಿ ಅವ್ರು ನನ್ನನ್ನು ಅಮಾನತು ಮಾಡಿದ್ದಾರೆ. ಮೇಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಇಬ್ಬರನ್ನು ವಿಚಾರಣೆ ಮಾಡಿ ನನ್ನನ್ನು ಅಮಾನತು ಮಾಡಬೇಕಾಗಿತ್ತು. ಏಕಾಏಕಿ ಅಮಾನತು ಮಾಡಿ ಆದೇಶ ಮಾಡಿದ್ದು, ನಾನು ನೋವು ಅನುಭವಿಸುತ್ತಿದ್ದೇನೆ."