ಬೆಳಗಾವಿ: ಮೋಸದ ಎರಡೆನೇ ಹೆಸರು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಅವರು ಅಂದಿನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗಡದೇವರಮಠ ಅವರಿಗೆ ಮೋಸ ಮಾಡಿ ಬಿ ಫಾರಂ ತಂದು ರಮೇಶ ಜಾರಕಿಹೊಳಿ ಅವರ ಆಶೀರ್ವಾದದಿಂದ ಆಯ್ಕೆಯಾಗಿ ಈಗ ಅವರಿಗೂ ಮೋಸ ಮಾಡಿದ್ದಾರೆ. ಮೋಸದ ಎರಡನೇ ಹೆಸರು ಲಕ್ಷ್ಮಿ ಹೆಬ್ಬಾಳ್ಕರ್ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ರಾಜಹಂಸಗಡದಲ್ಲಿ ನಿರ್ಮಾಣ ಹಂತದ ಶಿವಾಜಿ ಮಹಾರಾಜರ ಮೂರ್ತಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ತಮ್ಮ ಕನಸು ಎಂದು ಹೇಳುತ್ತಾರೆ. ಅವರು ರಾಜಕೀಯದಲ್ಲಿ ಇಲ್ಲದ ಸಮಯದಲ್ಲಿ ಈ ಯೋಜನೆಯನ್ನು ನಾನು ಮೊದಲು ಅನುದಾನ ತಂದು ಕಾಮಗಾರಿ ಪ್ರಾರಂಭಿಸಿದ್ದೆ. 2008ರಲ್ಲಿ ನಾನು ಶಾಸಕನಾಗಿ ಆಯ್ಕೆಯಾದ ಸಮಯದಲ್ಲಿ ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸಮಯದಲ್ಲಿ ಈ ಸ್ಥಳವನ್ನು ಸ್ವಚ್ಛ ಮಾಡಿ, ಈ ಯೋಜನೆಗೆ ಪ್ರಾರಂಭಿಸಿದ್ದೆ. ಅವತ್ತಿನ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರ ಮುಂದೆ ಯೋಜನೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸಚಿವರು ಕಿರುದಾರಿಯಲ್ಲಿ ನಡೆದುಕೊಂಡು ಬಂದು ಈ ಯೋಜನೆಗೆ ಹಣವನ್ನು ಬಿಡುಗಡೆ ಮಾಡಿದ್ದರು ಎಂದು ಹೇಳಿದರು.
ಆ ಸಮಯದಲ್ಲಿ ಈಗಿನ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಯಾವುದೇ ಪಕ್ಷದಿಂದ ಸ್ವರ್ಧೆ ಮಾಡಿರಲಿಲ್ಲ, ಬಿಜೆಪಿ ಸರ್ಕಾರ ಕೊನೆ ಆಡಳಿತ ಅವಧಿ ಕಾಲ 2013ರಲ್ಲಿ ಈ ಯೋಜನೆ ಮಂಜೂರಾತಿ ನೀಡಲಾಗಿತ್ತು. ನಂತರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ಕಾಮಗಾರಿ ಮುಂದುವರಿಯಲಿಲ್ಲ. ಆದರೆ ಇವತ್ತು ಲಕ್ಷ್ಮಿ ಹೆಬ್ಬಾಳ್ಕರ್ ಈ ಯೋಜನೆ ತಮ್ಮ ಕನಸು ಎಂದು ಹೇಳುತ್ತಾರೆ. ಯಾಕೆ ಸುಳ್ಳು ಹೇಳುತ್ತಿರಿ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ ಪ್ರಶ್ನೆ ಮಾಡಿದರು.