ಬೆಳಗಾವಿ: ಕ್ಷೇತ್ರದ ಅಭಿವೃದ್ಧಿ ಮಾಡಿದ್ದರೆ ಈ ಉಡುಗೊರೆ ಕೊಡುವ ಕೆಲಸ ಬರುತ್ತಿರಲಿಲ್ಲ. ಸೋಲುವ ಭಯ ಇದ್ದಿದ್ದರಿಂದ ಈ ತರಹದ ವೇದಿಕೆಗಳು ಸಿದ್ಧಗೊಳ್ಳುತ್ತಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ್ ಪಾಟೀಲ್, ಪರೋಕ್ಷವಾಗಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ಗೆ ಟಾಂಗ್ ನೀಡಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜನರ ಸಮಸ್ಯೆಗಳನ್ನು ಆಲಿಸಬೇಕು. ಕ್ಷೇತ್ರದ ಸಮಸ್ಯೆ ಸರಿ ಮಾಡುತ್ತೇವೆಂದು ಮತ ಕೇಳಬೇಕು. ಈ ರೀತಿಯ ಗಿಫ್ಟ್ ರಾಜಕಾರಣ ಯಾವ ಪಕ್ಷಕ್ಕೂ ಸಲ್ಲದು ಎಂದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದವಾದ ಸುಳೇಭಾವಿ ಗ್ರಾಮದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಅವರ ಅಭಿಮಾನಿ ಬಳಗದ ವತಿಯಿಂದ ಇಂದು ಸಂಜೆ ನಡೆಸುತ್ತಿರುವ ಶಕ್ತಿ ಪ್ರದರ್ಶನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಮಾವೇಶಕ್ಕೆ ಹೋಗದಿರಲು ಬಹುತೇಕ ಎಲ್ಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ನಿರ್ಧಾರ ಮಾಡಿದ್ದಾರೆ. ಆ ಸಮಾವೇಶ ರಮೇಶ್ ಜಾರಕಿಹೊಳಿ ಅವರ ಅಭಿಮಾನಿ ಬಳಗದ ವತಿಯಿಂದ ನಡೆಯುತ್ತಿದೆ. ಜೊತೆಗೆ ಬಿಜೆಪಿ ಬ್ಯಾನರ್ ಇಲ್ಲದ ವೇದಿಕೆಯಾಗಿದ್ದರಿಂದ ತಾವು ಹೋಗುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಮೇಶ್ ಜಾರಕಿಹೊಳಿ ನಮ್ಮ ಪಕ್ಷದ ನಾಯಕರು. ಅವರ ಬಗ್ಗೆ ಗೌರವ ಇದೆ. ಇದು ಬಿಜೆಪಿ ಕಾರ್ಯಕ್ರಮವಲ್ಲ. ಪಕ್ಷಾತೀತವಾಗಿ ನಡೆಯಲಿದೆ ಎಂದು ಸ್ವತಃ ರಮೇಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ. ಹೀಗಾಗಿ, ನಾನು ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ನನ್ನ ಮನಸು ಒಪ್ಪೋದಿಲ್ಲ. ಕಾರ್ಯಕರ್ತರಿಗೆ ಹೋಗಿ ಅಂತಾನೂ ಹೇಳಲ್ಲ, ಹೋಗಬೇಡಿ ಅಂತಾನೂ ಹೇಳಲ್ಲ. ನಮಗೆ ಯಾವುದೇ ಹಿರಿಯ ನಾಯಕರಿಂದ ಸೂಚನೆ ಬಂದಿಲ್ಲ. ಬಿಜೆಪಿ, ಕಮಲ, ಹಿಂದುತ್ವ, ನರೇಂದ್ರ ಮೋದಿ ನನ್ನ ಉಸಿರು. ಬಿಜೆಪಿ ಬ್ಯಾನರ್ ಇಲ್ಲದ ವೇದಿಕೆ ಮೇಲೆ ಹೋಗಲು ಮನಸ್ಸಿಲ್ಲ ಎಂದರು.