ಕರ್ನಾಟಕ

karnataka

ETV Bharat / state

ಸಂಗೊಳ್ಳಿ ರಾಯಣ್ಣ ಉತ್ಸವದಲ್ಲಿ ಪ್ರೇಕ್ಷಕರ ಮನ ಗೆದ್ದ ಜಂಗೀ ನಿಖಾಲಿ ಕುಸ್ತಿ

ಸಂಗೊಳ್ಳಿ ರಾಯಣ್ಣ ಉತ್ಸವದ ಅಂಗವಾಗಿ ನಡೆದ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ರಾಷ್ಟ್ರ ಮಟ್ಟದ ಜಂಗೀ ನಿಖಾಲಿ ಕುಸ್ತಿ ಪಂದ್ಯಾವಳಿ ಜನಮನ ಸೆಳೆಯಿತು.

ಸಂಗೊಳ್ಳಿ ರಾಯಣ್ಣ ಉತ್ಸವ  wrestling competition  Sangolli Rayanna Festival  ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆ
ಸಂಗೊಳ್ಳಿ ರಾಯಣ್ಣ ಉತ್ಸವ: ಕುಸ್ತಿಪ್ರಿಯರ ಮನ ತಣಿಸಿದ ಜಂಗೀ ನಿಖಾಲಿ ಕುಸ್ತಿ ಪಂದ್ಯಾವಳಿ

By ETV Bharat Karnataka Team

Published : Jan 19, 2024, 9:30 AM IST

Updated : Jan 19, 2024, 9:48 AM IST

ಬೆಳಗಾವಿ:ಸಂಗೊಳ್ಳಿ ರಾಯಣ್ಣ ಉತ್ಸವದ ನಿಮಿತ್ತ ಸಂಗೊಳ್ಳಿಯಲ್ಲಿ ಆಯೋಜಿಸಿದ್ದ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ರಾಷ್ಟ್ರ ಮಟ್ಟದ ಜಂಗೀ ನಿಖಾಲಿ ಕುಸ್ತಿ ಪಂದ್ಯಾವಳಿ ಕ್ರೀಡಾಪ್ರಿಯರ ಮನಸೂರೆಗೊಳಿಸಿತು. ಒಂದೆಡೆ ಕುಸ್ತಿ ಕಣದ ಮೇಲೆ ಹರಡಲಾಗಿದ್ದ ಹೂವಿನ ಮೇಲೆ ಅಜಾನುಬಾಹು ಕುಸ್ತಿಪಟುಗಳ ಶಕ್ತಿ ಪ್ರದರ್ಶನ ನಡೆದು ಅಖಾಡ ರಂಗೇರಿತ್ತು. ಮತ್ತೊಂದೆಡೆ, ಕುಸ್ತಿ ವೀಕ್ಷಿಸಲು‌ ನೆರೆದಿದ್ದ ಕ್ರೀಡಾಪ್ರೇಮಿಗಳು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಶಿಳ್ಳೆ, ಕೇಕೆ, ಚಪ್ಪಾಳೆಯ ಮೂಲಕ ಪೈಲ್ವಾನರನ್ನು ಹುರಿದುಂಬಿಸುತ್ತಿದ್ದರು. ಇದಕ್ಕೂ ಮುನ್ನ ಶಾಸಕ ಮಹಾಂತೇಶ ಕೌಜಲಗಿ ಸೇರಿದಂತೆ ಗಣ್ಯರು ಪಂದ್ಯಾವಳಿಗೆ ಚಾಲನೆ ನೀಡಿದರು.

ಮಹಾನ್ ಭಾರತ ಕೇಸರಿಗೆ ಗೆಲುವು:ಪುರುಷರ ವಿಭಾಗದಲ್ಲಿ ಮಹಾರಾಷ್ಟ್ರದ ಮಹಾನ್ ಭಾರತ ಕೇಸರಿ ಜ್ಞಾನೇಶ್ವರ (ಮೌಳಿ) ಜಮದಾಳೆ ವಿರುದ್ಧ ಕಾದಾಡಿದ ಹರಿಯಾಣದ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತ ಕುಸ್ತಿಪಟು ವಿಶಾಲ ಡೋಲು ಅವರು ಡಾವ್ ಪೇಚ್ ಮೂಲಕ ವಿಜಯ ಪತಾಕೆ ಹಾರಿಸಿದರು. ದೆಹಲಿಯ ಸಚಿನ್​ ಕುಮಾರ್ ವಿರುದ್ಧ ರಾಣೆಬೆನ್ನೂರಿನ ಕರ್ನಾಟಕ ಕೇಸರಿ ಕಾರ್ತಿಕ ಕಾಟೆ ಗೆಲುವಿನ‌ ನಗೆ ಬೀರಿದರು.

ಜಂಗೀ ನಿಖಾಲಿ ಕುಸ್ತಿ

ಧಾರವಾಡದ ನಾಗರಾಜ ಬಸಿಡೋಣಿಗೆ ಗೆಲುವು:ಧಾರವಾಡದ ನಾಗರಾಜ ಬಸಿಡೋಣಿ ಹರಿಯಾಣದ ಉದಯ ಅವರನ್ನು ಅಖಾಡದಲ್ಲಿ ಮಕಾಡೆ ಮಲಗಿಸಿದರು. ಕಲಬುರಗಿಯ ಪ್ರವೀಣ ಹಿಪ್ಪರಗಿ ವಿರುದ್ಧ ಅಖಾಡಕ್ಕಿಳಿದಿದ್ದ ಮಹಾರಾಷ್ಟ್ರದ ಪ್ರಣಿತ್ ಭೋಸಲೆ ಸೋಲುಂಡರು. ದಾವಣಗೆರೆ ಬಸವರಾಜ ಹುದಲಿ ವಿರುದ್ಧ ಸೊಲ್ಲಾಪೂರದ ಸಾಗರ ಚೌಗಲೆ ಗೆದ್ದರು. ಅಥಣಿ ಮಹೇಶಕುಮಾರ ಲಂಗೋಟಿ ವಿರುದ್ಧ ಮಹಾರಾಷ್ಟ್ರದ ಚೇತನ ಕತಗಾರ‌ ಪರಾಭವಗೊಂಡರು.

ಗೆದ್ದು ಬೀಗಿದ ಭುವನೇಶ್ವರಿ:ಮಹಿಳಾ ವಿಭಾಗದಲ್ಲಿ ದಸರಾ ಕಿಶೋರಿ ಹಳಿಯಾಳದ ಮಹಿಳಾ ಕುಸ್ತಿಪಟು ಪ್ರಿನ್ಸಟ್ ಸಿದ್ಧಿ ಮತ್ತು ಮಹಾರಾಷ್ಟ್ರ ರಾಷ್ಟ್ರೀಯ ಪದಕ ವಿಜೇತ ಕುಸ್ತಿ ಪಟು ದೀಪಾಲಿ ನಡುವೆ ನಡೆದ ಪಂದ್ಯಗಳು ಸಮಬಲ ಫಲಿತಾಂಶ ಕಂಡುಬಂತು. ಇನ್ನು ಹಲಗಾ ರಾಷ್ಟ್ರೀಯ ಪದಕ ವಿಜೇತೆ ಲಕ್ಷ್ಮೀ ಪಾಟೀಲ ಮತ್ತು ಮಹಾರಾಷ್ಟ್ರದ ರಾಷ್ಟ್ರೀಯ ಪದಕ ವಿಜೇತೆ ಸಾಧನಾ ಕಾಟ್ಕರ ನಡುವೆ ನಡೆದ ಕಾದಾಟ ಕೂಡ ಸಮಬಲದ ಫಲಿತಾಂಶದಲ್ಲಿ ಅಂತ್ಯವಾಯಿತು. ಬಾಗಲಕೋಟೆ ಕಾವೇರಿ ಯಾಡಹಳ್ಳಿ ವಿರುದ್ಧ ಗದಗದ ಭುವನೇಶ್ವರಿ ಗೆದ್ದು ಬೀಗಿದರು. ಬೆಳಗಾವಿ ಭಾಗ್ಯಶ್ರೀ ಹಾಗೂ ಗದಗದ ವೈಷ್ಣವಿ ನಡುವಿನ ಪಂದ್ಯದಲ್ಲಿ ಸಮಬಲ ಸಾಧಿಸಿದರು.

ಕುಸ್ತಿಪ್ರಿಯರ ಮನ ತಣಿಸಿದ ಜಂಗೀ ನಿಖಾಲಿ ಕುಸ್ತಿ ಪಂದ್ಯಾವಳಿ

ಅದೇ ರೀತಿ, ಬೆಳಗಾವಿ ನಿಹಾರಿಕಾ ಯಾದವ ವಿರುದ್ಧ ಮಹಾರಾಷ್ಟ್ರದ ಅಮೃತಾ ಮಿರಗೆ ಜಯ ಗಳಿಸಿದರು. ಪುರುಷರ ವಿಭಾಗದಲ್ಲಿ ಒಟ್ಟು 30 ಜೋಡಿ, ಮಹಿಳಾ ವಿಭಾಗದಲ್ಲಿ 5 ಜೋಡಿ ಕುಸ್ತಿ ನಡೆದವು. ಕುಸ್ತಿಪ್ರಿಯರಿಗೆ ಎಲ್ಲ ಪೈಲ್ವಾನರು ತಮ್ಮ ವಿವಿಧ ಪಟ್ಟುಗಳ ಮೂಲಕ ಹಬ್ಬದ ರಸದೌತಣ ಉಣಬಡಿಸಿದರು.

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಚಚಡಿ, ಉಪಾಧ್ಯಕ್ಷ ಫಕ್ಕೀರಪ್ಪ ಕುರಿ, ತಹಶೀಲ್ದಾರ್ ಸಚ್ಚಿದಾನಂದ ಕುಚನೂರ, ತಾ.ಪಂ‌.ಕಾರ್ಯನಿರ್ವಾಹಕ ಅಧಿಕಾರಿ ಸುಭಾಸ ಸಂಪಗಾಂವಿ, ಸದಸ್ಯರಾದ ಬಸವರಾಜ ಕೊಡ್ಲಿ, ಇಮಾಮಹುಸೇನ ಖುದ್ದುನವರ, ರತ್ನಾ ಆನೇಮಠ, ಈರಣ್ಣಾ ಹಳಿಮನಿ, ಶಿವಕುಮಾರ ಪೂಜೇರ, ಬಾಬು ತಳವಾರ, ಸಂಗನಗೌಡ ಪಾಟೀಲ, ದೀಪಾ ಬಡವಣ್ಣವರ, ಗಂಗವ್ವಾ ಹೊಳೆಪ್ಪನವರ, ಮಂಜುಳಾ ಕೊಡೊಳ್ಳಿ ಸೇರಿ ಇತರರಿದ್ದರು. ಸಾವಿರಾರು ಕ್ರೀಡಾಭಿಮಾನಿಗಳು ಕುಸ್ತಿ ವೀಕ್ಷಿಸಿ ಖುಷಿಪಟ್ಟರು.

ಜಂಗೀ ನಿಖಾಲಿ ಕುಸ್ತಿ ಪಂದ್ಯಾವಳಿ

ಇದನ್ನೂ ಓದಿ:ಹಾವೇರಿ: ಕೇಕ್​ನಲ್ಲಿ ಮೂಡಿಬಂದ ಅಯೋಧ್ಯೆ ರಾಮ ಮಂದಿರ

Last Updated : Jan 19, 2024, 9:48 AM IST

ABOUT THE AUTHOR

...view details