ಚಿಕ್ಕೋಡಿ:ಸಂಘಪರಿವಾರದ ಹಿನ್ನೆಲೆ ಉಳ್ಳವರು ಪಕ್ಷಕ್ಕಾಗಿ ತೊಡಗಿಸಿಕೊಳ್ಳೋದು ಸ್ವಲ್ಪ ಕಡಿಮೆ. ಅದು ಯಾಕೆ ಅಂತಾ ನನಗೆ ಗೊತ್ತಿಲ್ಲ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಸ್ಪರ್ಧೆ ಮಾಡಿರುವ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ ಪರ ಪ್ರಚಾರಕ್ಕೆ ಚಿಕ್ಕೋಡಿಗೆ ಆಗಮಿಸಿದ್ದ ಸಂಸದ ಜಿಗಜಿಣಗಿ, ನನ್ನ ಚುನಾವಣೆ ಸೇರಿದಂತೆ ಉಳಿದ ಚುನಾವಣೆಗಳಲ್ಲಿ ಅರುಣ್ ಶಹಾಪುರ ದೂರ ಉಳಿದಿದ್ದರು.
ಸಂಘ ಪರಿವಾರದಿಂದ ಬಂದ ಹಿನ್ನೆಲೆ ಹಾಗಿದ್ದರೂ ನನಗೆ ಗೊತ್ತಿಲ್ಲ. ಸಂಘ ಪರಿವಾರದ ಹಿನ್ನೆಲೆ ಉಳ್ಳವರು ಪಕ್ಷದಲ್ಲಿ ಸಕ್ರಿಯವಾಗಿ ಭಾಗವಹಿಸುವುದಿಲ್ಲ. ನನಗಂತೂ ಅದರ ಬಗ್ಗೆ ಸರಿ ಬಗ್ಗೆ ಗೊತ್ತಿಲ್ಲ. ಆದರೆ, ನನಗೆ ಹಾಗೇ ಅನ್ನಿಸುತ್ತಿದೆ. ನಾನೇನು ಸಂಘ ಪರಿವಾರದಿಂದ ಬಂದಿಲ್ಲ. ನಾವು ಜನತಾದಳ ಪರಿವಾರದಿಂದ ಬಂದವರು ಎಂದು ಹೇಳಿದ್ದಾರೆ.
ಹಿಂದೆ ಕಾಂಗ್ರೆಸ್ ಪಕ್ಷಕ್ಕೂ ಆಹ್ವಾನ ಇತ್ತು. ಆದರೆ ನಾನು ಆಗ ಬಿಜೆಪಿಗೆ ಬಂದಿದ್ದೇನೆ. ಬಿಜೆಪಿ ಹಾಗೂ ಸಂಘದ ಬಗ್ಗೆ ಮನಸ್ಸಿನಲ್ಲಿ ಭಕ್ತಿ ಇದೆ. ಇನ್ನೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಹಾಳು ಮಾಡಿದ್ದೆ ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಅವರು ಸತ್ತಾಗ ಆರು ಅಡಿ ಜಾಗ ಕೊಟ್ಟಿಲ್ಲ. ಹಾಗಾಗಿ ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ ಎಂದರು.
ಶಿಕ್ಷಕರ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಿಂದ ಹಣ ಹಾಗೂ ಲ್ಯಾಪ್ ಟಾಪ್ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಕಾಶ ಹುಕ್ಕೇರಿ ಅವರು ಈ ಹಿಂದೆ ಚೆನ್ನಾಗಿ ಕೆಲಸ ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಇದೇನು ಸಾರ್ವತ್ರಿಕ ಚುನಾವಣೆ ಅಲ್ಲ, ಇಲ್ಲಿ ಅವರ ಆಟ ನಡೆಯೋದಿಲ್ಲ. ಅವರೇನು ಹೆಬ್ಬೆಟ್ಟಿನವರಲ್ಲ. ಹಣ ಪಡೆದರೂ ಮತ ಮಾತ್ರ ಹಾಕಲ್ಲ. ಮತದಾರರು ವಿದ್ಯಾವಂತರಿದ್ದಾರೆ. ಒಂದು ಲಕ್ಷ ಹಣ, ಟಿವಿ ಕೊಡಲಿ. ದುಡ್ಡು ಕೊಟ್ಟರೂ ಕಾಂಗ್ರೆಸ್ ಗೆ ಮತ ಹಾಕುವುದಿಲ್ಲ ಅನ್ನೋ ವಿಶ್ವಾಸವಿದೆ ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ.
ಓದಿ :'ಹೊರಗಿನವರಿಗೆ' ಟಿಕೆಟ್ ಹಂಚಿಕೆ ಬಿಸಿ ನಡುವೆ ಕುದುರೆ ವ್ಯಾಪಾರದ ಭೀತಿ: ರೆಸಾರ್ಟ್ ಮೊರೆ ಹೋದ ಕೈ ಶಾಸಕರು!