ಬೆಳಗಾವಿ:ದೇಶದೆಲ್ಲೆಡೆ ಕೊವಿಡ್-19 (ಕೊರೊನಾ) ವೈರಸ್ ಬಾಧಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಆತಂಕದ ನಡುವೆಯೂ ಪೌರ ಕಾರ್ಮಿಕರು ನಗರವನ್ನು ನಿತ್ಯ ಸ್ವಚ್ಚಗೊಳಿಸುವ ಮೂಲಕ ತಮ್ಮ ಪ್ರಾಣದ ಹಂಗು ತೊರೆದು ಬದುಕನ್ನು ಜನಸೇವೆಗಾಗಿ ಮೀಸಲಿಟ್ಟಿದ್ದಾರೆ. ಆದ್ರೆ, ಮಾರಕ ಖಾಯಿಲೆ ಕೊರೊನಾ ಪೌರ ಕಾರ್ಮಿಕರ ಬದುಕನ್ನೂ ಹಿಡಿದು ಅಲುಗಾಡಿಸಿದೆ.
ಜಗತ್ತಿನ ಜಂಘಾಶಕ್ತಿಯನ್ನೇ ಉಡುಗಿಸಿದ ಈ ಸೋಂಕು ಹೆಚ್ಚಿದಂತೆ ದೇಶದೆಲ್ಲೆಡೆ ಲಾಕ್‌ಡೌನ್‌ಗೆ ಪ್ರದಾನಿ ನರೇಂದ್ರ ಮೋದಿ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಬಹುತೇಕ ಇಲಾಖೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವ್ಯಾಪಾರ ವಹಿವಾಟುಗಳು ಬಂದ್ ಆಗಿವೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಆದರೆ, ಬೆಳಿಗ್ಗೆ 5ರಿಂದಲೇ ನಗರದ ಸ್ವಚ್ಚತೆ ಕಾಪಾಡುವ ಕಾರ್ಮಿಕರ ಗತಿಯೇನು? ಕೊರೊನಾ ಸೋಂಕಿನ ನಡುವೆಯೂ ಇಡೀ ನಗರವನ್ನು ಸ್ವಚ್ಛಗೊಳಿಸುವ ಇವರು, ತಮ್ಮ ಜೀವವನ್ನು ಪಣಕ್ಕಿಟ್ಟು ಕಾರ್ಯ ನಿರ್ವಹಿಸುವ ವೈದ್ಯರಿಗಿಂತ ಏನು ಕಡಿಮೆ ಇಲ್ಲ.
ಆದ್ರೀಗ ತಮಗೂ ಎಲ್ಲಿ ಸೋಂಕು ಹರಡುತ್ತೋ ಎಂಬ ಭಯದಿಂದ ರಜೆ ನೀಡುವಂತೆ ಪಾಲಿಕೆಗೆ ಮನವಿ ಮಾಡಿಕೊಂಡಿದ್ದಾರೆ. ಆದ್ರೆ, ಪಾಲಿಕೆ ರಜೆ ನೀಡುತ್ತಿಲ್ಲ ಎಂಬುವುದು ಪೌರ ಕಾರ್ಮಿಕರ ದೂರು. ಆದ್ರೆ,ಅಗತ್ಯ ಸೇವೆಯಡಿ ಬರುವ ಕಾರಣ ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ಸೇರಿದಂತೆ ಕೆಲ ಸರ್ಕಾರಿ ಇಲಾಖೆಗಳಿಗೆ ರಜೆ ಘೋಷಿಸಲಾಗಿಲ್ಲ.