ಬೆಳಗಾವಿ: ರೋಗಿಯನ್ನು ಬೇರೊಂದು ವಾರ್ಡ್‌ಗೆ ಶಿಫ್ಟ್ ಮಾಡುವ ಸಂದರ್ಭದಲ್ಲಿ ಬಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಆತನ ಕೈಯಲ್ಲಿಯೇ ಸಲಾಯಿನ್ ಬಾಟಲ್ ಹಿಡಿಸಿರುವ ಅಮಾನವೀಯ ಘಟನೆ ನಡೆದಿದ್ದು, ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ರೋಗಿಯ ಕೈಯಲ್ಲಿ ಸಲಾಯಿನ್ ಇರಿಸಿ ಆ್ಯಂಬುಲೆನ್ಸ್‌ನಲ್ಲಿ ಹತ್ತಿಸಿಕೊಂಡ ಹೋಗುವಾಗ ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ.
ಚಿಕಿತ್ಸೆಗೆ ದಾಖಲಾಗಿದ್ದ ರೋಗಿಯ ಕೈಯಲ್ಲಿಯೇ ಸಲಾಯಿನ್ ಬಾಟಲ್ ಹಿಡಿಸಿದ ಸಿಬ್ಬಂದಿ ಅಪಘಾತದಲ್ಲಿ ಗಾಯಗೊಂಡು ಬಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಈ ವೇಳೆ ತುರ್ತು ಚಿಕಿತ್ಸಾ ವಿಭಾಗದಿಂದ ಸಾಮಾನ್ಯ ವಾರ್ಡ್‌ಗೆ ಶಿಫ್ಟ್ ಮಾಡುವ ವೇಳೆ ಈ ಘಟನೆ ನಡೆದಿದೆ.
ಆಸ್ಪತ್ರೆಯಲ್ಲಿ ಸ್ಟ್ರೆಚರ್, ವ್ಹೀಲ್ ಚೇರ್ ಇಲ್ವಾ?. ಇದ್ದರೂ ಬಳಕೆ ಮಾಡ್ತಿಲ್ಲವೇಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಇತ್ತೀಚೆಗಷ್ಟೇ ಸ್ಟ್ರೆಚರ್ ಇಲ್ಲದೇ ಮಗುವನ್ನು ಎತ್ತಿಕೊಂಡು ಹೋಗುವ ವಿಡಿಯೋ ಕೂಡ ವೈರಲ್ ಆಗಿದ್ದು, ಆ ಘಟನೆ ಮಾಸುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗಿದೆ.