ಚಿಕ್ಕೋಡಿ:ಮನುಷ್ಯನ ಜೀವನ ಶೈಲಿಯ ಬದಲಾವಣೆಯಿಂದ ನಿಸರ್ಗ ತನ್ನ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಮಣ್ಣು, ಗಾಳಿ ಹಾಗು ನೀರಿನಲ್ಲಿ ರಾಸಾಯನಿಕ ಸೇರಿಕೊಂಡು ಹೊಸ ಸಮಸ್ಯೆಗಳಿಗೆ ನಿಸರ್ಗ ಜನ್ಮ ನೀಡುತ್ತಿದೆ. ಹೀಗಾಗಿ ಮಣ್ಣು, ನೀರು, ಗಾಳಿ, ಇಂಧನ ರಕ್ಷಣೆಗೆ ಜನವರಿ 12, 13ರಂದು ಭೂತಾಯಿಯ ರಕ್ಷಣೆಗೆ ಸಂತರ-ರೈತರ ಮಹಾಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕನ್ಹೇರಿ ಸಿದ್ಧಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಚಿಕ್ಕೋಡಿ ಪಟ್ಟಣದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಜರ ಕಾಲದ ಸಾವಯವ ಕೃಷಿಯನ್ನು ಪ್ರತಿಯೊಬ್ಬರೂ ಇಂದು ಮುಂದುವರಿಸಬೇಕಾಗಿದೆ. ಸಾವಯವ ಕೃಷಿ ಜಾಗೃತಿಗೆ 2024ರ ಜನವರಿ 12, 13ರಂದು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನ್ಹೇರಿ ಮಠದ ಆವರಣದಲ್ಲಿ ಸಾವಯವ ಕೃಷಿ ಪರಿವಾರ ಹಾಗೂ ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿಸ್ಟೇಟ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್ ಸಹಯೋಗದಲ್ಲಿ "ಭೂತಾಯಿಯ ರಕ್ಷಣೆಗೆ "ಸಂತರ-ರೈತರ ಮಹಾಸಮಾವೇಶ" ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರೈತ ಬೆಳೆಯುವ ಬೆಳೆಯ ಇಳುವರಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಹಾಕಿ ಬೆಳೆಯಲು ಹೋದರೂ ಸಹಿತ ಅಪೇಕ್ಷೆಯಂತೆ ಬೆಳೆಗಳು ಬರ್ತಿಲ್ಲ. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಹೊಸ ಹೊಸ ರೋಗಗಳೂ ಉದ್ಭವಿಸುತ್ತಿವೆ. ಆದ್ದರಿಂದ ರೈತರನ್ನು ಎಚ್ಚರಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.