ಬೆಳಗಾವಿ: ನಗರದಲ್ಲಿ ಯುವ ಕ್ರಿಕೆಟರ್ವೊಬ್ಬ ಅತ್ಯದ್ಭುತ ಕ್ಯಾಚ್ ಹಿಡಿಯುವ ಮೂಲಕ ಇದೀಗ ಸಖತ್ ಸುದ್ದು ಮಾಡುತ್ತಿದ್ದಾನೆ. ಈ ಕ್ಯಾಚ್ ಕ್ರಿಕೆಟ್ ಇತಿಹಾಸಲ್ಲಿ ಹೊಸತಾಗಿದ್ದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್, ನ್ಯೂಜಿಲ್ಯಾಂಡ್ ಆಟಗಾರ ಜಿಮ್ಮಿ, ಕ್ರಿಕೆಟ್ ಬರಹಗಾರ ಓಂಕಾರ ಮಂಕಾಮೆ ಸೇರಿದಂತೆ ಹಲವರು ಟ್ವೀಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಯುವ ಆಟಗಾರ ಕಿರಣ್ ತರಳೇಕರ್ ಸದ್ಯ ಈ ಪ್ರಶಂಸೆಗಳಿಗೆ ಪಾತ್ರರಾಗಿದ್ದು ಕ್ರಿಕೆಟ್ ಲೋಕದ ನೂತನ ಪ್ರಯೋಗಕ್ಕೆ ಸಾಕ್ಷಿಯಾಗಿದ್ದಾರೆ.
ಮ್ಯಾಜಿಕ್ ಕ್ಯಾಚ್ ಹಿಡಿದ ಕಿರಣ್ ತರಳೇಕರ್ ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಯುವಕ ಹಿಡಿದ ಅತ್ಯದ್ಭುತ ಕ್ಯಾಚ್ಗೆ ಕ್ರಿಕೆಟ್ ಗಣ್ಯರು ಫಿದಾ ಆಗಿದ್ದು, ಟ್ವೀಟ್ ಮಾಡುವ ಮೂಲಕ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ಫುಟ್ಬಾಲ್ ಆಡುವ ಹುಡುಗನನ್ನು ಕ್ರಿಕೆಟ್ ಆಡಲು ಕರೆದುಕೊಂಡು ಬಂದರೆ ಹೀಗೆ ಆಗುತ್ತದೆ'!! ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.
ಸಚಿನ್ ತೆಂಡೂಲ್ಕರ್ ಮಾಡಿರುವ ಟ್ವೀಟ್‌ಗೆ 82 ಸಾವಿರ ಲೈಕ್ ಬಂದಿದ್ದು, 2.8 ಮಿಲಿಯನ್ ಜನ ವೀಕ್ಷಣೆ ಮಾಡಿದ್ದಾರ. 480 ಜನ ತರಹೇವಾರಿ ಕಾಮೆಂಟ್ ಮಾಡಿದ್ದು ಸುಮಾರು 6 ಸಾವಿರ ಜನ ರಿಟ್ವೀಟ್ ಮಾಡಿಕೊಂಡಿದ್ದಾರೆ. ಸದ್ಯ ಈ ಯುವ ಆಟಗಾರನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ಬುದ್ದಿವಂತಿಕೆ ಇದ್ದರೆ ಕ್ರಿಕೆಟ್‌ನಲ್ಲಿ ಹೇಗೆಲ್ಲಾ ಕ್ಯಾಚ್ ಹಿಡಿಯಬಹುದು ಎನ್ನುವುದಕ್ಕೆ ಇದು ನಿದರ್ಶನವಾಗಿದೆ ಎಂದು ಹಲವರು ಆತನ ಚಾಣಕ್ಷತಣವನ್ನು ಕೊಂಡಾಡುತ್ತಿದ್ದಾರೆ.
ಇತ್ತೀಚೆಗೆ ಬೆಳಗಾವಿಯ ವ್ಯಾಕ್ಸಿನ್ ಡಿಪೊ ಆವರಣದಲ್ಲಿ ನಡೆದ ಪಂದ್ಯ ಇದಾಗಿದೆ. ಎದುರಾಳಿ ತಂಡದ ಬ್ಯಾಟ್ಸ್ಮ್ಯಾನ್ ಹೊಡೆದ ಬಾಲ್ ಅನ್ನು ಬೌಂಡರಿ ಗೆರೆಯಾಚೆ ನೆಗೆದು ಹಿಡಿಯುವ ಮೂಲಕ ಕಿರಣ್ ಗಮನ ಸೆಳೆದಿದ್ದಾರೆ. ಬಾಲ್ ಬೌಂಡರಿ ಆಚೆ ಬೀಳುತ್ತಿರುವುದನ್ನು ಗಮನಿಸಿದ ಕಿರಣ್, ಕ್ಷಣಾರ್ಧದಲ್ಲೇ ಗಾಳಿಯಲ್ಲಿ ಹಾರಿ ಚೆಂಡನ್ನು ಫುಟ್ಬಾಲ್ ರೀತಿ ಕಾಲಿನಿಂದ ಒದ್ದು ಗ್ರೌಂಡ್ ಒಳಕ್ಕೆ ಅಟ್ಟಿದ್ದಾರೆ. ಈ ವೇಳೆ ಆತ ಒದ್ದ ಚೆಂಡನ್ನು ಇನ್ನೊಬ್ಬ ಆಟಗಾರ ಹಿಡಿದಿದ್ದಾರೆ. ಈ ಅಪರೂಪದ ಕ್ಯಾಚ್ ದೃಶ್ಯ ಕಂಡು ಅಲ್ಲಿದ್ದವರೇ ಅಚ್ಚರಿಗೆ ಒಳಗಾಗಿದ್ದಾರೆ.
ಇದೀಗ ಕಿರಣ್ ಹಿಡಿದ ಅದ್ಭುತ ಕ್ಯಾಚ್ ದೃಶ್ಯ ಸಾಮಾಜಿಕ ಜಾಗ ಪಡೆದಿದೆ. ಈ ವಿಡಿಯೋ ತುಣುಕನ್ನು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್ ಕೂಡ ನೋಡಿ ಮೆಚ್ಚಿಕೊಂಡಿದ್ದಾರೆ. ಕನ್ನಡಿಗನ ಫೀಲ್ಡಿಂಗ್ಗೆ ಫಿದಾ ಆಗಿರುವ ಅವರು, ‘ಇದು ಸರ್ವಕಾಲಿಕ ಶ್ರೇಷ್ಠ ಕ್ಯಾಚ್’ ಎಂದು ಟ್ವೀಟ್ ಮಾಡಿದ್ದಾರೆ. ಇವರಷ್ಟೇ ಅಲ್ಲದೇ ನ್ಯೂಜಿಲೆಂಡ್ ಆಟಗಾರ ಜಿಮ್ಮಿ ನಿಶಮ್ ಕೂಡ ಈ ವಿಡಿಯೋ ಹಾಕಿ ಟ್ವೀಟ್ ಮಾಡಿದ್ದು, ಈ ಕ್ಯಾಚ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಓಂಕಾರ ಮಂಕಾಮೆ ಕೂಡ ಟ್ವೀಟ್ ಮಾಡಿದ್ದು ಬೌಂಡರಿ ಕ್ಯಾಚಿಂಗ್ ಅನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಇನ್ನೂ ಈ ಕ್ಯಾಚ್ ನೋಡಿದ ಹಲವರು ಅದು ಔಟ್ ಅಲ್ಲ ಸಿಕ್ಸ್ ಎಂದು ವಾದಿಸಿದ್ದಾರೆ. ಆದರೆ, ತೀರ್ಪುಗಾರರು ಮಾತ್ರ ಔಟ್ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮೋದಿ ಔತಣಕೂಟದಲ್ಲಿ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು: ಯಶ್, ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾಗಿ