ಚಿಕ್ಕೋಡಿ : ಸಿದ್ದರಾಮಯ್ಯನವರು ಆರ್ಎಸ್ಎಸ್ ಬಗ್ಗೆ ಮಾತನಾಡುವ ಮೊದಲು ಸಂಘಟನೆಯ ಕುರಿತು ತಿಳಿದುಕೊಳ್ಳಬೇಕು ಎಂದು ಮೀನುಗಾರಿಕೆ ಸಚಿವ ಎಸ್ ಅಂಗಾರ ಹೇಳಿದರು. ತಾಲೂಕಿನ ಯಡೂರು ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೊಬ್ಬ ಸಂಘದ ಕಾರ್ಯಕರ್ತನಾಗಿ ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸುತ್ತೇನೆ. ಸಿದ್ದರಾಮಯ್ಯನವರು ಮಾತನಾಡುವ ಮೊದಲು ಆರ್ಎಸ್ಎಸ್ ಸಂಘಟನೆಯ ಬಗ್ಗೆ ತಿಳಿದುಕೊಳ್ಳಬೇಕು.
ಸಿದ್ದರಾಮಯ್ಯನವರು ಆರ್ಎಸ್ಎಸ್ ಬಗ್ಗೆ ತಿಳಿದು ಮಾತನಾಡಲಿ ಇಂತಹ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ ಎಂದರು. ಇದೇ ವೇಳೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿರುದ್ದ ಮಾಜಿ ಶಾಸಕ ಸಂಜಯ್ ಪಾಟೀಲ್ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ, ಅದು ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ತೋಟಕ್ಕೆ ಭೇಟಿ ನೀಡಿದ ಅಂಗಾರ : ಯಡೂರು ಗ್ರಾಮದ ಸುಜೀತ್ ದೇಸಾಯಿಯರ ತೋಟಕ್ಕೆ ಭೇಟಿ ನೀಡಿ ಮುತ್ತು ಕೃಷಿ ವೀಕ್ಷಣೆ ಮಾಡಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆಗೆ ರೋಗ ಬಂದು ರೈತರು ಸಂಕಷ್ಟದಲ್ಲಿದ್ದಾರೆ. ಇಲ್ಲಿನ ಯಶಸ್ವಿ ರೈತ ಸುಜೀತ ದೇಸಾಯಿಯವರ ಸಿಹಿ ನೀರಿನ ಮುತ್ತಿನ ಕೃಷಿಯ ಬಗ್ಗೆ ಕೇಳಿದ್ದೇನೆ.
ಹೀಗಾಗಿ, ಅವರ ತೋಟಕ್ಕೆ ನಾನೇ ಸ್ವತಃ ಬಂದು ವೀಕ್ಷಣೆ ಮಾಡುತ್ತಿದ್ದೇನೆ. ಇಲ್ಲಿ ಅವರು ಅಳವಡಿಸಿಕೊಂಡಿರುವ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುತ್ತೇನೆ. ಅದನ್ನು ನಮ್ಮ ರೈತರಿಗೆ ಇಲಾಖೆ ವತಿಯಿಂದ ನಾನು ತಿಳಿಸುವ ಪ್ರಯತ್ನ ಮಾಡುತ್ತೇನೆ. ಮುತ್ತು ಕೃಷಿ ಹಾಗೂ ಮೀನು ಕೃಷಿಯ ಬಗ್ಗೆ ನಮ್ಮ ರೈತರಿಗೆ ತಿಳಿ ಹೇಳುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.