ಚಿಕ್ಕೋಡಿ (ಬೆಳಗಾವಿ):ಕರ್ನಾಟಕದ ಗಡಿ ಭಾಗದಲ್ಲಿರುವ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್ ಹಾಗೂ ಕಾಗವಾಡ ತಾಲೂಕು ಚೆಕ್ಪೋಸ್ಟ್ನಲ್ಲಿ ಆರ್‌ಟಿಓ ಅಧಿಕಾರಿಗಳು ಹಗಲು ದರೋಡೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೊರೊನಾ ಸಂಕಷ್ಟದಲ್ಲಿ ಜನರು ಜೀವನ ನಡೆಸುವುದೇ ಕಷ್ಟವಾಗಿದ್ದು, ಹೊತ್ತಿನ ಅನ್ನಕ್ಕೂ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭದಲ್ಲಿ ರೈತರ ವಾಹನಗಳನ್ನು ತಡೆದು ಅವರಿಂದ ಆರ್‌ಟಿಓ ಅಧಿಕಾರಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳಿವೆ.
ಗಡಿನಾಡು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಕೋಗನೊಳ್ಳಿ ಹಾಗೂ ಕಾಗವಾಡ ತಾಲೂಕಿನ ಚೆಕ್‌ಪೋಸ್ಟ್ ಹತ್ತಿರ ಆರ್‌ಟಿಓ ಅಧಿಕಾರಿಗಳು ಮೂರು ಚಕ್ರ, ನಾಲ್ಕು ಚಕ್ರ ಸೇರಿದಂತೆ ರೈತರ ತರಕಾರಿ ವಾಹನಗಳನ್ನು ತಡೆದು ನಿಯಮಗಳನ್ನು ಗಾಳಿಗೆ ತೂರಿ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.
ಕೊರೊನಾ ಹಾವಳಿಯ ನಡುವೆ, ಈಗಿರುವ ಪ್ರವಾಹದ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಆರ್‌ಟಿಓ ಅಧಿಕಾರಿಗಳ ಈ ನಡೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂಥವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ನಾವು ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳುತ್ತಾರೆ ರೈತ ಮುಖಂಡ ಗಂಗಾಧರ ದೊಡಮನಿ.
ಚೆಕ್ಪೋಸ್ಟ್ಗಳಲ್ಲಿ ಆರ್‌ಟಿಓ ಅಧಿಕಾರಿಗಳಿಂದ ಹಗಲು ದರೋಡೆ ಆರೋಪ ಜಿಲ್ಲೆಯ ಕೋಗನೊಳ್ಳಿ ಚೆಕ್‌ಪೋಸ್ಟ್ ಸೇರಿದಂತೆ ವಿವಿಧೆಡೆ ನಮ್ಮ ರೈತರ ವಾಹನಗಳು ಸಂಚರಿಸುತ್ತವೆ. ಪ್ಯಾಸೆಂಜರ್, ಗೂಡ್ಸ್ ವಾಹನಗಳು ಓಡಾಡುತ್ತಿವೆ. ಆದರೆ ಇಲ್ಲಿಯ ಸಾರಿಗೆ ಇಲಾಖೆಯ ಅಧಿಕಾರಿಗಳು ಆ ವಾಹನಗಳನ್ನು ತಡೆ ಹಿಡಿದು ಹಫ್ತಾ ಎನ್ನುವುದಕ್ಕಿಂತಲೂ ರಾಜಾರೋಷವಾಗಿ ಲಂಚ ತೆಗೆದುಕೊಂಡು ದಂಧೆ ಮಾಡುತ್ತಿದ್ದಾರೆ ಎಂದು ಗಂಗಾಧರ್ ಕಿಡಿಕಾರಿದ್ದಾರೆ.
ಬೆಳಗಾವಿ ಜಿಲ್ಲೆ ಸೇರಿದಂತೆ ಚಿಕ್ಕೋಡಿ ಭಾಗದಲ್ಲಿ ಹೆಚ್ಚು ಸಚಿವರು ಇದ್ದರೂ ಕೂಡಾ ಈ ದಂಧೆ ನಡೆಯುತ್ತಿದೆ. ಇದರ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆ ಮಾಡುವವರು ಯಾರು ಇಲ್ಲದಂತಾಗಿದೆ. ಸದ್ಯ ಕಾರ್ಯ ನಿರ್ವಹಿಸುತ್ತಿರುವ ಆರ್‌ಟಿಓ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ರೈತ ಮುಖಂಡ ಗಂಗಾಧರ ಆಗ್ರಹಿಸಿದ್ದಾರೆ.