ಬೆಳಗಾವಿ: ರಾಜ್ಯದಲ್ಲಿನ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ ರಾಜೀವ್ ಗಾಂಧಿ ಆವಾಸ್ ಯೋಜನೆ ಮನೆಗಳು ಪ್ರಭಾವಿಗಳ ಪಾಲಾಗಿವೆ ಎಂದು ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆರ್ಟಿಐ ಅನ್ವಯ ರಾಜ್ಯದಲ್ಲಿ 2001 ರಿಂದ 2018 ರ ಅವಧಿಯಲ್ಲಿ ಸುಮಾರು 39 ಲಕ್ಷ ಮನೆಗಳ ನಿರ್ಮಾಣ ಮಾಡಲಾಗಿದ್ದು 21,682 ಕೋಟಿ ಹಣ ವ್ಯಯ ಮಾಡಲಾಗಿದೆ. ಇಷ್ಟೊಂದು ದೊಡ್ಡ ಯೋಜನೆ ಬಡವರಿಗೆ ತಲುಪಿಲ್ಲ. ಇಲ್ಲಿ ಪ್ರಭಾವಿಗಳ ಕೈವಾಡದಿಂದ ಮನೆಗಳು ಫಲಾನುಭವಿಗಳಿಗೆ ಸಿಕ್ಕಿಲ್ಲ ಎಂದು ಆರೋಪಿಸಿದರು.
ವಸತಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಗ್ರಾಮ ಪಂಚಾಯಿತಿ, ಪಟ್ಟಣ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಡಂಗುರ ಸಾರಬೇಕು. ಕಡ್ಡಾಯವಾಗಿ ಗ್ರಾಮಸಭೆ ನಡೆಸಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಆಯ್ಕೆ ಮಾಡಬೇಕು ಎಂಬ ನಿಯಮವಿದ್ದರೂ ಇದನ್ನು ಗಾಳಿಗೆ ತೂರಿ ಕೇವಲ ರಾಜಕಾರಣಿಗಳು ಹಾಗೂ ಪಂಚಾಯಿತಿ ಸದಸ್ಯರು ಸೇರಿ ಮನೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿದ ಮೇಲೆ ಸರ್ಕಾರ ಹಣ ಬಿಡುಗಡೆ ಮಾಡದೇ ಸತಾಯಿಸಿದೆ. ಇದರಿಂದ ಬಡವರು ಸಾಲ ಮಾಡಿ ಅರ್ಧಕ್ಕೆ ಮನೆ ನಿಲ್ಲಿಸಿದ ಉದಾಹರಣೆಗಳಿವೆ. ರಾಜಕೀಯ ಹಾಗೂ ಹಣಬಲ ಇದ್ದವರು ಮಾತ್ರ ಮನೆ ಪಡೆಯುವಂತಾಗಿದ್ದು, ಗುಡಿಸಿಲಿನಲ್ಲಿ ಇರುವವರು ಮಾತ್ರ ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ ಎಂದರು.
ಸರ್ಕಾರ ನೀಡಿರುವ ಆಶ್ರಯ ಯೋಜನೆಯ ಮಾಹಿತಿ ನೋಡಿದರೆ ಒಂದು ಹೊಸ ಕರ್ನಾಟಕ ನಿರ್ಮಾಣ ಮಾಡಬಹುದಾಗಿತ್ತು. ಕೋಟಿ, ಕೋಟಿ ಹಣ ಲಪಟಾಯಿಸುವ ಹುನ್ನಾರ ನಡೆಯುತ್ತಿದ್ದು ಇದನ್ನು ತಡೆಗಟ್ಟಬೇಕು. ಬಡ ಫಲಾನುಭವಿಗಳಿಗೆ ಸರ್ಕಾರದ ಮನೆಗಳು ತಲುಪಬೇಕಾದರೆ ಮಧ್ಯವರ್ತಿಗಳ ಕೈವಾಡವನ್ನು ತಪ್ಪಿಸಬೇಕು ಎಂದರು.