ಬೆಳಗಾವಿ: ಕನ್ನಡಪರ ಹೋರಾಟಗಾರರ ವಿರುದ್ಧ ರೌಡಿಶೀಟ್ ಓಪನ್ ಆಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಬೆಳಗಾವಿ ಪೊಲೀಸರ ನಡೆ ಈಗ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದವರ ವಿರುದ್ಧ ರೌಡಿಶೀಟ್ ಓಪನ್ ಆಗಿದೆ. ಬೆಳಗಾವಿ ಪೊಲೀಸರು ಸಂಪತ್‌ಕುಮಾರ್ ದೇಸಾಯಿ ಮತ್ತು ಅನಿಲ್ ದಡ್ಡಿಮನಿ ವಿರುದ್ಧ ರೌಡಿಶೀಟ್ ಓಪನ್ ಮಾಡಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ನೋಟಿಸ್ ಜಾರಿ ಮಾಡಿದ್ದ ಕಾರಣ ಕೇಳಿ ಕನ್ನಡಪರ ಹೋರಾಟಗಾರರಿಗೆ ಶಾಕ್ ಆಗಿದೆ. ಟಿಳಕವಾಡಿ ಠಾಣೆಯಿಂದ ಅನಿಲ್ ದಡ್ಡಿಮನಿಗೆ ಮತ್ತು ಎಪಿಎಂಸಿ ಠಾಣೆಯಿಂದ ಸಂಪತ್‌ಕುಮಾರ್ ದೇಸಾಯಿಗೆ ಕಾರಣ ಕೇಳಿ ನೋಟಿಸ್ ಜಾರಿಯಾಗಿವೆ. ಚುನಾವಣೆ ಕಾಲದಲ್ಲಿ ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆ ಭಂಗ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಮುಚ್ಚಳಿಕೆ ನೀಡುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
50 ಸಾವಿರ ರೂಪಾಯಿ ಮೊತ್ತದ ಸ್ವಯಂ ಮುಚ್ಚಳಿಕೆ ಹಾಗೂ ಇಷ್ಟೇ ಮೊತ್ತದ ಇಬ್ಬರು ಜಾಮೀನುದಾರರಿಂದ ಮುಚ್ಚಳಿಕೆ ಪಡೆಯುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ. ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಹೋರಾಟದಲ್ಲಿ ಈ ಇಬ್ಬರು ಯುವಕರು ಮುಂಚೂಣಿಯಲ್ಲಿದ್ದರು. ಅಷ್ಟೇ ಅಲ್ಲ, ಈ ಇಬ್ಬರು ಯುವಕರು 2021ರ ಡಿಸೆಂಬರ್‌ನಲ್ಲಿ ಬೆಳಗಾವಿ ಅಧಿವೇಶನಕ್ಕೆ ಪ್ರತಿಯಾಗಿ ಎಂಇಎಸ್ ಆಯೋಜಿಸಿದ್ದ ಮಹಾಮೇಳಾವ್‌ಗೆ ನುಗ್ಗಿ ಎಂಇಎಸ್ ಮುಖಂಡ ದೀಪಕ್ ದಳವಿಗೆ ಮಸಿ ಬಳಿದಿದ್ದರು. ಬಳಿಕ ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದ ಹಿನ್ನೆಲೆ ಜೈಲು ಸೇರಿ ಬಿಡುಗಡೆಯಾಗಿದ್ದರು.