ಚಿಕ್ಕೋಡಿ: ಈಗಿನ ಕಾಲದಲ್ಲಿ 100 ರೂಪಾಯಿ ಕೊಟ್ಟರೂ ಸಹ ಗುಣಮಟ್ಟದ ಆಹಾರ ಸಿಗುವುದು ಕಷ್ಟಕರವಾಗಿದೆ. ಆದರೆ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ಕೇವಲ 20 ರೂಪಾಯಿಗೆ ಉತ್ತಮ ಗುಣಮಟ್ಟದ ರೊಟ್ಟಿ ಊಟ ಸಿಗುತ್ತದೆ.
ಸಂಕೇಶ್ವರದಲ್ಲಿ 20 ರೂ.ಗೆ ರೊಟ್ಟಿ ಊಟ: ಬಾಯಿಗೆ ರುಚಿ, ದೇಹಕ್ಕೆ ತಾಕತ್ತು
ಉತ್ತರ ಕರ್ನಾಟಕ ಎಂದರೆ ನೆನಪಾಗುವುದು ಖಡಕ್ ಜೋಳದ ರೊಟ್ಟಿ. ಅತ್ಯಂತ ಕಡಿಮೆ ಬೆಲೆಗೆ ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ಆರೋಗ್ಯಕರ ಜುನಾಕ ರೊಟ್ಟಿ ಊಟ ದೊರೆಯುತ್ತದೆ.
ಪಟ್ಟಣದ ಹೈಟೆಕ್ ಲೇಔಟ್ನಲ್ಲಿ ಉದ್ಯಮಿ ಪವಣ ಕಣಗಲಿ ಎಂಬುವವರು ಅಗ್ಗದ ಊಟದ ಮನೆ ಆರಂಭಿಸಿದ್ದಾರೆ. ಸಾಮಾನ್ಯವಾಗಿ ಲೇಔಟ್ಗಳಲ್ಲಿ ಯಾರೂ ಈ ತರಹದ ಊಟದ ಮನೆ ತೆರೆಯುವುದಿಲ್ಲ. ಆದರೆ ದೂರದೃಷ್ಟಿಯ ಪವಣ ಕಣಗಲಿ ಅಗ್ಗದ ಊಟದ ಮನೆ ಆರಂಭಿಸುವ ಮೂಲಕ ಹೈಟೆಕ್ ಲೇಔಟ್ಗೆ ಸ್ಪೆಷಲ್ ಟಚ್ ನೀಡಿದ್ದಾರೆ.
ಇಲ್ಲಿ ಗ್ರಾಹಕರಿಗೆ ಆರೋಗ್ಯಕರವಾದ ಪಕ್ಕಾ ಉತ್ತರ ಕರ್ನಾಟಕ ಪ್ರಸಿದ್ಧ ಗ್ರಾಮೀಣ ಶೈಲಿಯ ಜುನಾಕಾ ರೊಟ್ಟಿ ಊಟ ದೊರೆಯುತ್ತಿದೆ. ಈ ಊಟದ ಮನೆ ಜನವರಿಯಲ್ಲಿ ಆರಂಭವಾದರೂ ಲಾಕ್ಡೌನ್ನಿಂದ ಬಂದ್ ಆಗಿತ್ತು. ಈಗ ಮತ್ತೆ ಜುನಾಕ ರೊಟ್ಟಿಯ ಊಟ ಆರಂಭವಾಗಿದ್ದು, ಇಲ್ಲಿನ ಕೂಲಿ ಕಾರ್ಮಿಕರಿಗೆ, ಬಡ ಜನರಿಗೆ ಅಗ್ಗದ ದರದಲ್ಲಿ ಊಟದ ಸೇವೆ ಆರಂಭಿಸಲಾಗಿದೆ. ತಾವು ದುಡಿಯುವ ಅಲ್ಪ ಹಣದಲ್ಲಿ ಅಪ್ಪಟ ಗ್ರಾಮೀಣ ಶೈಲಿಯ ಊಟವನ್ನ ಸವಿಯಬೇಕೆನ್ನುವವರಿಗೆ ಆರೋಗ್ಯಕರ ಹಾಗೂ ರುಚಿಕರ ಊಟ ನೀಡಲಾಗುತ್ತಿದೆ.