ಬೆಳಗಾವಿ:ವಾಟ್ಸ್ಆ್ಯಪ್ನಲ್ಲಿ ಚರ್ಚಿಸಿ ಬಳಿಕಬೈಕ್ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ 9 ಮಂದಿ ಆರೋಪಿಗಳನ್ನು ಗೋಕಾಕ್ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಬೆಣಚಿನಮರಡಿಯ ಖಿಲಾರಿ ಗ್ಯಾಂಗ್ ಮತ್ತು ಗೋಕಾಕ್ ಎಸ್‌ಪಿ ಸರ್ಕಾರ ಗ್ಯಾಂಗ್ ಎಂಬ ಹೆಸರಿಟ್ಟುಕೊಂಡು ದರೋಡೆಗೆ ಇಳಿದಿದ್ದ ಗೋಕಾಕ್ ತಾಲೂಕಿನ ಬೆಣಚಿನಮರಡಿಯ ದುರ್ಗಪ್ಪ ವಡ್ಡರ, ನಾಗಪ್ಪ ಮಾದರ, ಯಲ್ಲಪ್ಪ ಗೀಸನಿಂಗವ್ವಗೋಳ, ಕೃಷ್ಣಾ ಪೂಜೇರಿ, ರಾಮಸಿದ್ಧ ತಪಸಿ, ಬೀರಸಿದ್ಧ ಗುಂಡಿ, ಉದ್ದಪ್ಪ ಖಿಲಾರಿ, ಗೋಕಾಕ್ನ ಪರಶುರಾಮ ಗೊಂಧಳಿ ಹಾಗೂ ಆಕಾಶ ತಳವಾರ ಬಂಧಿತರು.
ಸಾಮಾನ್ಯವಾಗಿ ವಾಟ್ಸ್‌ಆ್ಯಪ್ ಗ್ರೂಪ್ಗಳನ್ನು ತಮ್ಮ ಕೆಲಸ ಸುಗಮಗೊಳಿಸಲು, ಸಂದೇಶ ಮತ್ತು ಮಾಹಿತಿಯನ್ನು ಏಕಕಾಲಕ್ಕೆ ಹೆಚ್ಚು ಜನರಿಗೆ ತಲುಪುವ ಉದ್ದೇಶಕ್ಕೆ ಬಳಸುತ್ತಾರೆ. ಆದರೆ ಈ ಆರೋಪಿಗಳು ಡಕಾಯಿತಿಗೆ ಬಳಸಿರುವ ಸಂಗತಿ ಪೊಲೀಸರ ತನಿಖೆಯಿಂದ ಬಯಲಾಗಿದೆ. ವಾಟ್ಸ್ಆ್ಯಪ್ನಲ್ಲಿ ಯಾವ ರೀತಿ ದರೋಡೆ ಮಾಡಬೇಕು?, ಎಲ್ಲಿ ಮಾಡಬೇಕು? ಎಂಬ ವಿಚಾರಗಳನ್ನು ಚರ್ಚಿಸಿ ಬಳಿಕ ಸಂಚು ರೂಪಿಸುತ್ತಿದ್ದರಂತೆ. ಅಲ್ಲದೇ ತಮ್ಮ ತಮ್ಮಲ್ಲೆ ಗ್ಯಾಂಗ್ಗಳನ್ನು ಮಾಡಿಕೊಂಡು ಸುಲಿಗೆ ಮಾಡುತ್ತಾ, ಜನರಲ್ಲಿ ಭೀತಿ ಹುಟ್ಟಿಸಿದ್ದರು.
ಸೆ.14ರಂದು ಗೋಕಾಕ್ನಿಂದ ಕನಸಗೇರಿಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಮಹಿಳೆಯನ್ನು ಅಡ್ಡಗಟ್ಟಿದ್ದ ಈ ಗ್ಯಾಂಗ್ ಅವರ ಕೊರಳಲ್ಲಿದ್ದ ಚಿನ್ನದ ಸರ ಮತ್ತು ಉಂಗುರ ಕಿತ್ತುಕೊಂಡು ಪರಾರಿಯಾಗಿದ್ದರು. ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದರು. ಅಲ್ಲದೇ ಗೋಕಾಕ್ ನಗರ, ಗ್ರಾಮೀಣ, ಅಂಕಲಗಿ ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ದರೋಡೆ, ಸುಲಿಗೆ, ದ್ವಿಚಕ್ರ ವಾಹನ ಮತ್ತು ಜಾನುವಾರು ಕಳ್ಳತನಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಇವುಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಹಿರಿಯ ಪೊಲೀಸರು ತನಿಖೆಗಾಗಿ ಗೋಕಾಕ್ ಸಿಪಿಐ ಗೋಪಾಲ ರಾಠೋಡ ನೇತೃತ್ವದಲ್ಲಿ ತಂಡ ರಚಿಸಿದ್ದರು. ಕಾರ್ಯಾಚರಣೆಗಿಳಿದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.