ಕರ್ನಾಟಕ

karnataka

ETV Bharat / state

ಮಣ್ಣಿಕೇರಿ ಮಹಾಲಕ್ಷ್ಮೀ ಮಂದಿರದಲ್ಲಿ ಕಳ್ಳರ ಕೈಚಳಕ: ಲಕ್ಷಾಂತರ ರೂ. ಮೌಲ್ಯದ ಆಭರಣ, ನಗದು ಕಳ್ಳತನ - ಬೆಳಗಾವಿ ಇತ್ತೀಚಿನ ಕ್ರೈಂ ಸುದ್ದಿ

ರಾತ್ರಿ ಕೈಚಳಕ ತೋರಿರುವ ಕಳ್ಳರು ಲಕ್ಷಾಂತರ ಮೌಲ್ಯದ ಆಭರಣ ಕದ್ದು ಪರಾರಿಯಾಗಿದ್ದು, ಇದೀಗ ಪ್ರಕರಣ ದಾಖಲಾಗಿದೆ.

mannikeri mahalakshmi temple
mannikeri mahalakshmi temple

By

Published : Oct 28, 2020, 12:30 AM IST

ಬೆಳಗಾವಿ:ಮಹಾಲಕ್ಷ್ಮೀ ದೇವಿಯ ಮೈಮೇಲಿದ್ದ 65 ಗ್ರಾಂ. ಚಿನ್ನಾಭರಣ, ಅರ್ಧ ಕೆ.ಜಿ ಬೆಳ್ಳಿಯ ಆಭರಣ ಸೇರಿದಂತೆ 1.5 ಲಕ್ಷ ರೂ. ಹುಂಡಿಯ ಹಣ ದೋಚಿ ಪರಾರಿಯಾಗಿರುವ ಘಟನೆ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.

ತಾಲೂಕಿನ ಮಣ್ಣಿಕೇರಿ ಗ್ರಾಮದ ಮಹಾಲಕ್ಷ್ಮೀ ಮಂದಿರದಲ್ಲಿ ರಾತ್ರಿ ವೇಳೆ ಕಳ್ಳರು ಕೈಚಳಕ ತೋರಿದ್ದು, ದೇವಸ್ಥಾನದ ಮುಖ್ಯದ್ವಾರ ಮತ್ತು ಗರ್ಭಗುಡಿಯ ಬಾಗಿಲನ್ನು ಮುರಿದು ದೇವಿಯ ಮೈಮೇಲಿನ ಬೆಲೆ ಬಾಳುವ ಆಭರಣ, ಹುಂಡಿಯ ಹಣ ದೋಚಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಣ್ಣಿಕೇರಿ ಗ್ರಾಮದ ಪಂಚರು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನ ಪ್ರಕಾರ ದೇವಸ್ಥಾನಲ್ಲಿನ ಒಟ್ಟು 3,62,000 ಮೌಲ್ಯದ ಆಭರಣ ಕಳ್ಳತನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಿಷಯ ತಿಳಿದು ಮಣ್ಣಿಕೇರಿ ಗ್ರಾಮದ ದೇವಸ್ಥಾನಕ್ಕೆ ಆಗಮಿಸಿದ ಕಾಕತಿ ಪಿಐಆರ. ಎಸ್.ಹಳ್ಳೂರ, ಪಿಎಸ್ಐ ಅವಿನಾಶ್​ ಯರಗೊಪ್ಪ, ಪಿಎಸ್ಐ (ಕ್ರೈಂ) ಆರ್.ಟಿ.ಲಕ್ಕನಗೌಡರ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ನಗರ ಹಾಗೂ ಗ್ರಾಮಗಳಲ್ಲಿನ ದೇವಾಲಯ ಹಾಗೂ ಮನೆಗಳಲ್ಲಿ ಯಾರು ಇಲ್ಲದ ವೇಳೆ ಕೀಲಿ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಜಿಲ್ಲಾ ಪೊಲೀಸರು ರಾತ್ರಿ ವೇಳೆ ಗಸ್ತು ಸಂಚಾರ ಹೆಚ್ಚಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಭಾರಿ ಕಳ್ಳತನವಾದರೂ ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೊಲೀಸರು ವಿಫಲವಾಗುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

ABOUT THE AUTHOR

...view details