ಬೆಳಗಾವಿ: ಕಳೆದ ಕೆಲವು ದಿನಗಳಿಂದ ಕುಂದಾನಗರಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸಿದೆ. ಜಿಲ್ಲೆಯ ಅನೇಕ ಭಾಗಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಗಳು ಜಲಾವೃತವಾಗಿವೆ.
ಬೆಳಗಾವಿಯಲ್ಲಿ ಮುಂದುವರೆದ ಮಳೆಯಿಂದಾಗಿ ರಸ್ತೆ ಸಂಪರ್ಕಗಳು ಕಡಿತ ಬೆಳಗಾವಿ, ಖಾನಾಪುರ, ಕಿತ್ತೂರು, ಬೈಲಹೊಂಗಲ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಖಾನಾಪುರ ತಾಲೂಕಿನ ಹಬ್ಬನಟ್ಟಿ ಗ್ರಾಮದ ಮಾರುತಿ ಮಂದಿರ ಸಂಪೂರ್ಣ ಜಲಾವೃತವಾಗಿದ್ದು, ದೇವಸ್ಥಾನದ ಕಳಸದವರೆಗೂ ನೀರು ಬಂದು ಮಂದಿರ ಮುಳುಗಡೆಯಾಗಿದೆ.
ಇನ್ನು ಖಾನಾಪುರ ತಾಲೂಕಿನಲ್ಲಿ ಹರಿಯುವ ಮಲಪ್ರಭಾ ನದಿ ಒಳಹರಿವು ಜಾಸ್ತಿಯಾಗಿದೆ. ತಾಲೂಕಿನ ಅಸೋಗಾ ಗ್ರಾಮದ ಸಂಪರ್ಕ ಕಡಿತವಾಗಿದ್ದು, ಸೇತುವೆ ಮೇಲೆ ನೀರು ಹರಿಯುತ್ತಿದೆ. ಅಷ್ಟೇ ಅಲ್ಲದೇ, ಅನೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತ ಮಾಡಲಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನು ಬೆಳಗಾವಿ ನಗರದಲ್ಲಿಯೂ ಮಳೆರಾಯನ ಆರ್ಭಟ ಮುಂದುವರೆದಿದ್ದು, ಜನರ ಪರಿಸ್ಥಿತಿ ಹೇಳತೀರದಾಗಿದೆ. ನಗರದ ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿ ಜನರು ದಿನನಿತ್ಯದ ಕೆಲಸಕ್ಕೂ ತೊಂದರೆ ಅನುಭವಿಸುವಂತಾಗಿದೆ. ಜೊತೆಗೆ ನಗರಕ್ಕೆ ಹೊಂದಿಕೊಂಡಿರುವ ಕೃಷಿ ಗದ್ದೆಗಳಿಗಲ್ಲಿ ನೀರು ತುಂಬಿಕೊಂಡಿದ್ದು, ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ.