ಬೆಳಗಾವಿ :ಗೋವಾ ಸೇರಿದಂತೆ ಇತರ ರಾಜ್ಯಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುತ್ತಿರುವ ಪಿಂಚಣಿ ಹೆಚ್ಚಿದ್ದು, ನಮ್ಮ ರಾಜ್ಯದಲ್ಲಿಯೂ ಅದನ್ನು ಹೆಚ್ಚಿಸಬೇಕು ಎನ್ನುವ ಬೇಡಿಕೆ ಕುರಿತು ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿದರು. ಹಣಕಾಸು ಲಭ್ಯತೆ ನೋಡಿಕೊಂಡು ಪಿಂಚಣಿ ಪರಿಷ್ಕರಣೆ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರ್.ಅಶೋಕ್ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು ಬಿ ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, 3804 ಜನ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿ ಇದೆ. ಈಗಾಗಲೇ ಅವರಿಗೆ 10 ಸಾವಿರ ಪಿಂಚಣಿ ಕೊಡುತ್ತಿದ್ದೇವೆ. ಪತಿ ಮತ್ತು ಪತ್ನಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಅಕಾಲಿಕ ಮರಣ ಹೊಂದಿದಲ್ಲಿ ಶವಸಂಸ್ಕಾರಕ್ಕೆ 4 ಸಾವಿರ ರೂಪಾಯಿ ಕೊಡಲಾಗುತ್ತಿದೆ. ಈಗ ಸದಸ್ಯರು 10 ರಿಂದ 15 ಸಾವಿರಕ್ಕೆ ಪಿಂಚಣಿ ಹೆಚ್ಚಿಸುವಂತೆ ಹೇಳಿದ್ದಾರೆ. ಸಿಎಂ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಗೋವಾ ಇತರ ರಾಜ್ಯದ ಉದಾಹರಣೆ ನೀಡಿದ್ದಾರೆ. ಸದಸ್ಯರ ಸಲಹೆಯನ್ನು ಪರಿಗಣಿಸಲಾಗುತ್ತದೆ. ಹಣಕಾಸು ಇಲಾಖೆ ಜೊತೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕಾಡಾನೆ ದಾಳಿ ತಡೆಗೆ ಕ್ರಮ :ಕಾಡಾನೆಗಳನ್ನು ಹಿಮ್ಮೆಟ್ಟಿಸಲು ತಂಡ ರಚನೆ ಮಾಡಿದ್ದು, ವನ್ಯಜೀವಿಗಳು ನೀರು ಅರಸಿ ಹಳ್ಳಿಗಳಿಗೆ ಬರದಂತೆ ತಡೆಯಲು ಅರಣ್ಯದಲ್ಲೇ ಕೆರೆಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಬಿಜೆಪಿ ಸದಸ್ಯ ಪ್ರಾಣೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು ರಕ್ಷಿತ ಅರಣ್ಯಗಳಲ್ಲಿ ಕೆರೆಗಳ ನಿರ್ಮಾಣಕ್ಕೆ ಒತ್ತು ಕೊಡಲಾಗುತ್ತಿದೆ. ಅರಣ್ಯದಂಚಿನಲ್ಲಿ ಸೌರಶಕ್ತಿ ಬೆಲಿ, ಕಂದಕಗಳ ನಿರ್ಮಾಣ, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಿದ್ದೇವೆ. ಕಳೆದ ಬಾರಿ 761 ಕಿ.ಮೀ ಕಂದಕ ನಿರ್ಮಿಸಿದ್ದು, 1105 ಕಿ.ಮೀ ಸೋಲಾರ್ ಬೇಲಿ, 133 ಕಿ.ಮೀ ರೈಲ್ವೆ ಬ್ಯಾರಿಕೇಡ್ ಮಾಡಲಾಗಿದೆ. ಈ ಬಾರಿ ಹೊಸದಾಗಿ150 ಕಿ.ಮೀ ಕಂದಕ ನಿರ್ಮಾಣ, 285 ಕಿ.ಮೀ ಸೌರಶಕ್ತಿ ಬೇಲಿ, 71 ಕಿ.ಮೀ ರೈಲ್ವೆ ಬ್ಯಾರಿಕೇಡ್ ಮಾಡುತ್ತಿದ್ದೇವೆ. ಈ ಬಾರಿ ಹೊಸದಾಗಿ ಆನೆ ಹಿಮ್ಮೆಟ್ಟಿಸುವ ತಂಡಗಳನ್ನು ರಚಿಸಿದ್ದೇವೆ. ಪ್ರತಿ ತಂಡಕ್ಕೆ 50 ಲಕ್ಷ ಹಣ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಆನೆ ತುಳಿತದಿಂದ ಮೃತಪಟ್ಟವರಿಗೆ ಪರಿಹಾರದ ಹಣವನ್ನು 7.5 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಿ ಸಿಎಂ ಆದೇಶಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಈವರೆಗೆ 5 ಪುಂಡಾನೆಗಳನ್ನು ಸೆರೆ ಹಿಡಿದಿದ್ದು, ಈ ವರ್ಷವೇ 4 ಪುಂಡಾನೆ ಸೆರೆ ಹಿಡಿಯಲಾಗಿದೆ. ಸರ್ಕಾರ ಈಗಾಗಲೇ ಬ್ಯಾರಿಕೇಡ್ ನಿರ್ಮಾಣ, ಪ್ರಾಣಿಗಳು ನೀರು ಅರಸಿ ಹಳ್ಳಿಗಳಿಗೆ ಬಾರದೆ ಅರಣ್ಯದಲ್ಲೇ ನೀರು ಸಿಗುವಂತೆ ಕೆರೆಗಳ ನಿರ್ಮಾಣ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು.