ಬೆಳಗಾವಿ(ಬೆಂಗಳೂರು):ಅರಣ್ಯ ಭೂಮಿ ಗಡಿ ಗುರುತಿಸಿ ನಿಖರ ನಕ್ಷೆ ಮಾಡುವ ಸಲುವಾಗಿ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಸರ್ವೆ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಇಂದು ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಹರೀಶ್ ಪೂಂಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಮೀಕ್ಷೆಯನ್ನು ಕಾಲಮಿತಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕರ್ನಾಟಕ ಅರಣ್ಯ ನಿಯಮದ ಪ್ರಕಾರ ಜಿಲ್ಲಾ ಅರಣ್ಯ ಅಥವಾ ರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಹಾಗೂ 100 ಮೀಟರ್ ವ್ಯಾಪ್ತಿ ಭೂಮಿ ಮಂಜೂರಾತಿ ಪೂರ್ವದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಮ್ಮತಿ ಪಡೆಯುವುದು ಕಡ್ಡಾಯವಾಗಿದೆ.
ಸಾಗುವಳಿ ಚೀಟಿಗೆ ಸಂಬಂಧಿಸಿದ ನಿರಾಪೇಕ್ಷಣ ಪತ್ರ: ರೈತರು ಕಂದಾಯ ಇಲಾಖೆ ಸಾಗುವಳಿ ಚೀಟಿಗೆ ಸಂಬಂಧಿಸಿದಂತೆ ನಿರಾಪೇಕ್ಷಣ ಪತ್ರ ಕೋರಿದಾಗ ಅರಣ್ಯ ಇಲಾಖೆಯ ದಾಖಲೆ, ಅಧಿಸೂಚನೆ ಹಾಗೂ ನಕಾಶೆಗಳೊಂದಿಗೆ ಪರಿಶೀಲಿಸಿ ಜಾಗವು ಅರಣ್ಯ ಪ್ರದೇಶ ವ್ಯಾಪ್ತಿಗೆ ಬರುತ್ತದೆ ಅಥವಾ ಇಲ್ಲವೇ ಎನ್ನುವ ಕುರಿತು ಹಿಂಬರಹ ನೀಡಲಾಗುತ್ತದೆ. ಅಧಿಸೂಚಿತ ಹಾಗೂ ಡೀಮ್ಡ್ ಅರಣ್ಯ ಪ್ರದೇಶಗಳಿಗೆ ಸರ್ವೆ ನಂಬರ್‍ವಾರು ವಿವರವಾದ ಮಾಹಿತಿ ಇಲ್ಲದಂತಹ ಸಂದರ್ಭದಲ್ಲಿ ನಿರಾಕ್ಷೇಪಣ ಪತ್ರ ನೀಡಲು ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ಜಂಟಿ ಮೋಜಿಣಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.