ಬೆಳಗಾವಿ: ಸುದೀರ್ಘ 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ 6 ತಿಂಗಳ ಹಿಂದೆಯಷ್ಟೇ ನಿವೃತ್ತನಾಗಿರುವ ಬೆಳಗಾವಿಯ ಯೋಧನೋರ್ವ ವಿಶ್ರಾಂತಿಗೆ ಜಾರದೆ ಗ್ರಾಮೀಣ ಭಾಗದಲ್ಲಿ ಅಬ್ಬರಿಸುತ್ತಿರವ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ ಸೇರಿದ ದೇಶದ ಪ್ರಮುಖ ಭಾಗಗಳಲ್ಲಿ ಸೇವೆ ಸಲ್ಲಿಸಿರುವ ಈ ಯೋಧ ಇದೀಗ ಸಮಾಜ ಮುಖಿ ಕಾರ್ಯದ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ನಿವೃತ್ತ ಯೋಧ ವೀರು ದೊಡ್ಡವೀರಪ್ಪನವರ ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಅಬ್ಬರಿಸುತ್ತಿದೆ. ಹಾಗಾಗಿ ಗ್ರಾಮೀಣ ಜನರಲ್ಲಿ ಜಾಗೃತಿ ಕೊರತೆಯನ್ನು ಮನಗಂಡ ವೀರು ದೊಡ್ಡವೀರಪ್ಪನವರ ಪ್ರತಿ ಮನೆಗೆ ತೆರಳಿ ಕೊರೊನಾ ಸೋಂಕಿನ ಬಗ್ಗೆ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಸ್ವಂತ ಖರ್ಚಿನಲ್ಲಿ ಕಿಟ್ ಹಂಚಿಕೆ:
17 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ಈಗಷ್ಟೇ ಸ್ವಗ್ರಾಮಕ್ಕೆ ಮರಳಿರುವ ವೀರು ದೊಡ್ಡವೀರಪ್ಪನವರ ಕುಟುಂಬ ಸದಸ್ಯರು, ಸಂಬಂಧಿಗಳು ಹಾಗೂ ಸ್ನೇಹಿತರನ್ನು ಭೇಟಿಯಾಗುತ್ತ ವಿಶ್ರಾಂತಿ ಪಡೆಯಬೇಕಿತ್ತು. ಆದರೆ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಅವರು ಇದೀಗ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
ತಮ್ಮ ಸ್ವಂತ ಖರ್ಚಿನಲ್ಲಿ ಮಾಸ್ಕ್, ಸ್ಯಾನಿಟೈಸರ್, ಸೋಪು ಹಾಗೂ ಬಿಸ್ಕಿಟ್ ಒಳಗೊಂಡ 2,500ಕ್ಕೂ ಅಧಿಕ ಕಿಟ್ಗಳನ್ನು ಗ್ರಾಮದ ಜೊತೆಗೆ ನೆರೆಯ ಗ್ರಾಮಗಳಲ್ಲಿಯೂ ವಿತರಿಸಿದ್ದಾರೆ. ಅಲ್ಲದೇ ಹಿರಿಯ ನಾಗರಿಕರ ಬಳಿ ತೆರಳಿ ಕೊರೊನಾದಿಂದ ಸಂರಕ್ಷಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಜತೆಗೆ ಬೈಲಹೊಂಗಲ ಪುರಸಭೆಯ ಪೌರಕಾರ್ಮಿಕರಿಗೆ, ತಾಲೂಕು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೂ ಕಿಟ್ ವಿತರಿಸಿದ್ದಾರೆ.
ಸ್ನೇಹಿತರು ಸಾಥ್:
ಜಮ್ಮುಕಾಶ್ಮೀರ, ಗುಜರಾಥ್, ರಾಜಸ್ಥಾನ, ನಾಸಿಕ್, ಪಶ್ಚಿಮ ಬಂಗಾಳ ಸೇರಿದಂತೆ ಹಲವು ಭಾಗಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. 5 ವರ್ಷ ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಸ್ವಗ್ರಾಮಕ್ಕೆ ಮರಳಿ ಇಲ್ಲಿ ಜನ ಸೇವೆಯಲ್ಲಿ ತೊಡಗಿರುವ ವೀರು ದೊಡ್ಡವೀರಪ್ಪನವರ ಅವರ ಕಾರ್ಯಕ್ಕೆ ಇವರ ಸ್ನೇಹಿತರು ಸಾಥ್ ನೀಡಿದ್ದಾರೆ.
ಕಿಟ್ ತಯಾರಿಸಲು ಹಲವರು ಆರ್ಥಿಕ ನೆರವನ್ನು ನೀಡುತ್ತಿದ್ದಾರೆ. ಗ್ರಾಮದ ಹಿರಿಯರು, ದಾನಿಗಳ ನೆರವು ಪಡೆದು ವೀರು ಮತ್ತಷ್ಟು ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಸಿದ್ಧರಾಗುತ್ತಿದ್ದಾರೆ. ಈ ಎಲ್ಲ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಕಿಟ್ ನೀಡಲು ವೀರು ದೊಡ್ಡವೀರಪ್ಪನವರ ಹಾಗೂ ಆತನ ಸ್ನೇಹಿತರು ಮುಂದಾಗಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ವೀರು ದೊಡ್ಡವೀರಪ್ಪನವರ, ನಾನು ಸೇನೆಯಲ್ಲಿದ್ದರೂ ಕಳೆದ 10 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಸಾಧಕರ ಸನ್ಮಾನದ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಿಸುತ್ತಿದ್ದೇನೆ. ಕೊರೊನಾ ಮೊದಲ ಅಲೆಯಲ್ಲಿ ರಜೆ ಸಿಗದಿದಕ್ಕೆ ಗ್ರಾಮಕ್ಕೆ ಬರಲಾಗಲಿಲ್ಲ. ಆದರೂ ಅಲ್ಲೇ ಇದ್ದುಕೊಂಡು ಕೊರೊನಾ ಜಾಗೃತಿ ಮೂಡಿಸಿದ್ದೇನೆ. ಇದೀಗ ಅವಕಾಶ ಸಿಕ್ಕಿದ್ದು, ಜನಸೇವೆ ಮಾಡುತ್ತಿದ್ದೇನೆ ಎಂದರು.