ಬೆಳಗಾವಿ: ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಅಕ್ರಮ ನಡೆದಿದ್ದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ಕೇಳಿದ ನಗರಾಭಿವೃದ್ಧಿ ಇಲಾಖೆಯ ಪುರಸಭೆಯಿಂದ ಟೆಂಡರ್ ಕಾಮಗಾರಿ ಲೋಪದೋಷದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಅದು ಪುರಸಭೆಯಲ್ಲ ಹಾಸನ ನಗರಸಭೆ, ನಗರೋತ್ಥಾನ ಅನುದಾನ, ವಿಶೇಷ ಅನುದಾನದ ಅಡಿಯಲ್ಲಿ ವಾರ್ಡ್ ವಾರು ಟೆಂಡರ್ ಮೂಲಕ ಆರ್ಥಿಕ ಇಲಾಖೆ ಮಾನದಂಡದಂತೆ ಟೆಂಡರ್ ಕರೆಯಲಾಗಿದೆ. ಆದರೆ ಸದಸ್ಯರು ಲೋಪದೋಷ ಆರೋಪ ಮಾಡಿದ್ದಾರೆ, ನಮ್ಮ ಇಲಾಖೆಯಲ್ಲಿ ಆ ತರಹದ ಲೋಪದೋಷ ಕಂಡುಬಂದಿಲ್ಲ. ನಿಖರವಾಗಿ ಲೋಪದೋಷ, ಯಾವ ವಾರ್ಡ್ ಎನ್ನುವುದು ಸೇರಿ ಇತರೆ ಮಾಹಿತಿ ಕೊಡಿ ನಾನು ಕಾನೂನು ಬದ್ದ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.
ಅಮೃತ್ ಯೋಜನೆಯಡಿ 29 ಕೋಟಿ ರೂ ಕೊಡಲಾಗಿದೆ. ಮೂರು ವರ್ಷದ ಯೋಜನೆಗಳ ವಿವರ ನೀಡಲಾಗಿದೆ. ಪ್ರಥಮ ದರ್ಜೆ ಗುತ್ತಿಗೆದಾರರಿಗೆ ಗುತ್ತಿಗೆ ಕೊಡಲಾಗಿದೆ. ನಿಯಮಾವಳಿಯಂತೆಯೇ ವರ್ಕ್ ಆರ್ಡರ್ ಕೊಡಲಾಗಿದೆ. ಸದಸ್ಯರು ಲೋಪದೋಷವಿದೆ, ಗುಣಮಟ್ಟ ಕಡಿಮೆ ಎಂದಿದ್ದಾರೆ. ಯಾವ ಅನುದಾನ ಯಾವ ವಾರ್ಡ್ನಲ್ಲಿ ಲೋಪ, ಅಕ್ರಮ ಆಗಿದೆ ಎಂದು ತಿಳಿಸಿದರೆ ಅಕ್ರಮವೆಸಗಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ ಎಂದರು.
29 ಕೋಟಿ ರೂ ಅನುದಾನ ಒಂದೇ ಪ್ಯಾಕೇಜ್ ಎಂದರೆ ಸಂಪುಟದಲ್ಲಿ ಒಪ್ಪಿಗೆ ಪಡೆಯಬೇಕು, ಪಡೆದಿದ್ದಾರಾ? ಎಂದು ಪ್ರಶ್ನಿಸಿ ಟೆಂಡರ್ ರದ್ದುಪಡಿಸಿ, ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ ನಗರೋತ್ಥಾನ ಮೂರನೇ ಹಂತದ ನಿಯಮ ಬೇರೆ, ನಾಲ್ಕನೇ ಹಂತದಲ್ಲಿ ಹಾಸನ ನಗರಸಭೆಯಲ್ಲಿ 40 ಕೋಟಿ ಹಣ ಕೊಡಲಾಗಿದೆ. ವಿಶೇಷ ಅನುದಾನದಲ್ಲಿಯೂ ಹೆಚ್ಚಿನ ಅನುದಾನ ಕೊಡಲಾಗಿದೆ.
ಇದಕ್ಕೆ ಹೊಸದಾಗಿ ನಿಯಮ ಮಾಡಲಾಗಿದೆ. ಜಿಲ್ಲಾ ಸಮಿತಿ, ರಾಜ್ಯ ಸಮಿತಿ ರಚಿಸಲಾಗಿದೆ. ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕ್ರಿಯಾಯೋಜನೆ ಅನುಮೋದನೆ ಆಗಬೇಕು. ಅದರಂತೆಯೇ ಎಲ್ಲವೂ ಆಗಿದೆ. ತಪ್ಪುಗಳಾಗಿದ್ದಲ್ಲಿ ನಿರ್ದಿಷ್ಟವಾದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ವಸತಿ ಯೋಜನೆ ಅಕ್ರಮಕ್ಕೆ ಕ್ರಮ:ಪೌರ ಕಾರ್ಮಿಕರಿಗಾಗಿ ನಿರ್ಮಿಸುತ್ತಿರುವ ನಿವಾಸಗಳಲ್ಲಿ ಕಳಪೆ ಕಾಮಗಾರಿ ಕಂಡುಬಂದಲ್ಲಿ ಪರಿಶೀಲಿಸಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳಿದರು.