ಅಥಣಿ: ಕೊರೊನಾ ಸಂದಿಗ್ಧ ಸಮಯದಲ್ಲಿ ರೆಮ್ಡೆಸಿವಿರ್ ಔಷಧ ರಾಮಬಾಣ. ಆದರೆ ಅಥಣಿ ತಾಲೂಕಿನ ಕೆಲವು ಅಧಿಕಾರಿಗಳು ಸತ್ತ ವ್ಯಕ್ತಿಯ ಹೆಸರಿನ ಮೇಲೆ ರೆಮ್ಡೆಸಿವಿರ್ ಮೆಡಿಸಿನ್ ತೆಗೆದುಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಆರೋಪಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯದಲ್ಲಿ ಕೊರೊನಾ ಸೋಂಕು ಸಮೂಹಕ್ಕೆ ಹಬ್ಬಿದ್ದು, ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಥಣಿಯಲ್ಲಿ ಆಡಳಿತಾರೂಢ ಸರ್ಕಾರದ ಪ್ರಭಾವಿ ರಾಜಕಾರಣಿಗಳು ಇದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಅಥಣಿ ಜನತೆ ಆರೋಗ್ಯ ರಕ್ಷಣೆಗೆ ಪರದಾಡುವಂತಾಗಿದೆ ಎಂದು ಮಂಗಸೂಳಿ ಕಳವಳ ವ್ಯಕ್ತಪಡಿಸಿದರು.
ದಿನನಿತ್ಯ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಇದರ ಜೊತೆಗೆ ಮೃತರ ಸಂಖ್ಯೆ ಏರುತ್ತಲೇ ಇದೆ. ಸರ್ಕಾರ ಜನರ ರಕ್ಷಣೆಗೆ ಮಾಡಬೇಕು. ಆದರೆ, ಸರ್ಕಾರ ಈ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದ್ದು. ರಾಜ್ಯದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಸ್ಥಳೀಯ ಶಾಸಕ ಮಹೇಶ್ ಕುಮಟಳ್ಳಿ ನಿತ್ಯ ತಾಲೂಕಿನ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸದ್ಯದ ಮಟ್ಟಿಗೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡುತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿರುವುದರಿಂದ ಇಬ್ಬರು ಜನಪ್ರತಿನಿಧಿಗಳು ನಿತ್ಯ ಆಸ್ಪತ್ರೆಗೆ ಭೇಟಿ ನೀಡಬೇಕೆಂದು ಆಗ್ರಹಿಸಿದರು.
ಮರಣ ಹೊಂದಿರುವ ವ್ಯಕ್ತಿಗಳ ಹೆಸರಿನಲ್ಲಿ ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಮಾರಾಟ: ಗಜಾನನ ಖಾಸಗಿ ಆಸ್ಪತ್ರೆಗಳಿಗೆ ತಾಲೂಕು ಆಡಳಿತ ಸರಿಯಾದ ಆಮ್ಲಜನಕ ಪೂರೈಕೆ ಮಾಡುತ್ತಿಲ್ಲ, ತಾಲೂಕು ವೈದ್ಯಾಧಿಕಾರಿ ಇದಕ್ಕೆ ಉತ್ತರಿಸಬೇಕೆಂದು ಪ್ರಶ್ನೆ ಮಾಡಿದರು. ರೆಮ್ಡೆಸಿವಿರ್ ವ್ಯಾಕ್ಸಿನ್ ಅಥಣಿಯಿಂದ ಹೊರಗಡೆ ಹೋಗುತ್ತಿದೆ, ಹೀಗಾಗಿ ಸರ್ಕಾರ ಸೂಕ್ತ ತನಿಖೆಗೆ ಮಾಡಬೇಕೆಂದು ಒತ್ತಾಯಿಸಿದರು. ತಾಲೂಕಿನಲ್ಲಿ ಆಕ್ಸಿಜನ್ ಕೊರತೆ ಕಂಡುಬರುತ್ತಿದೆ. ತುರ್ತಾಗಿ ಸರ್ಕಾರ ಅಥಣಿಯಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಬೇಕೆಂದು ಗಜಾನನ ಮಂಗಸೂಳಿ ಒತ್ತಾಯಿಸಿದರು.