ಕ್ಷಮೆ ಯಾಚಿಸಿದ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಬೆಳಗಾವಿ :ಮಾಜಿ ಪ್ರಧಾನಿ ಹಾಗೂ ಮಾಜಿ ಸ್ಪೀಕರ್ ವಿರುದ್ಧ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿರುವ ಸದಸ್ಯರು ಮನವೊಲಿಕೆ ನಂತರವೂ ಧರಣಿ ಮುಂದುವರಿಸಿದ್ದರು. ಇದರಿಂದ ರವಿಕುಮಾರ್ ಕ್ಷಮೆ ಯಾಚಿಸಿದರು.
ಗುರುವಾರ ಬೆಳಗ್ಗೆ ಧರಣಿ ಆರಂಭಿಸಿದ್ದ ಸದಸ್ಯರು ಮಧ್ಯಾಹ್ನ ಭೋಜನ ವಿರಾಮದ ನಂತರವೂ ಧರಣಿಯನ್ನು ಮುಂದುವರೆಸಿ ರವಿಕುಮಾರ್ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ಈ ಮಧ್ಯ ಸಭಾಪತಿಗಳು ಸದನದಲ್ಲಿ ಉಂಟಾದ ಗದ್ದಲವನ್ನು ಪರಿಹರಿಸುವ ಉದ್ದೇಶದಿಂದ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ಸಭೆ ನಡೆಸಿದರು. ಸಭೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮನವೊಲಿಕೆ ಪ್ರಯತ್ನ ನಡೆಸಿದರೂ ಸಹ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಒಪ್ಪಲಿಲ್ಲ.
ಕಲಾಪ ಮರು ಆರಂಭವಾದ ಬಳಿಕ ಮತ್ತೊಮ್ಮೆ ಸದನದಲ್ಲಿ ಮನವೊಲಿಸುವ ಪ್ರಯತ್ನವನ್ನು ಸಭಾಪತಿ ಹಾಗೂ ಸಭಾ ನಾಯಕರು ನಡೆಸಿದರು. ಆದರೆ ಯಾವುದೇ ಕಾರಣಕ್ಕೂ ತಾವು ತಮ್ಮ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದರು. ಜೆಡಿಎಸ್ ಸದಸ್ಯ ಬೋಜೇಗೌಡ ಮಾತನಾಡಿ, ಸದಾನವನ್ನು ಸುಗಮವಾಗಿ ಕೊಂಡೊಯ್ಯಲಿ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ಜವಾಬ್ದಾರಿ ಸಮಾನವಾಗಿದೆ. ಇದೀಗ ಆಡಳಿತ ಪಕ್ಷದ ಸದಸ್ಯರು ಈ ಸನ್ನಿವೇಶದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಒಂದು ಕ್ಷುಲ್ಲಕ ವಿಷಯಕ್ಕೆ ಸದನದ ಮಹತ್ವದ ಕಾಲಾವಧಿ ವ್ಯರ್ಥವಾಯಿತು ಎಂಬ ಸಂದೇಶ ಜನರಿಗೆ ತಲುಪಬಾರದು. ಇಂದಿನ ಘಟನೆ ಆಡಳಿತ ಪಕ್ಷವೇ ಸೋತು ಒಂದು ಕ್ಷಮೆ ಇಲ್ಲವೇ ವಿಷಾದ ವ್ಯಕ್ತಪಡಿಸುವ ಕಾರ್ಯ ಮಾಡಬೇಕು. ಇದು ನನ್ನ ಕಳಕಳಿಯ ಮನವಿ ಎಂದು ಹೇಳಿದರು.
ಇದೇ ವಿಚಾರವಾಗಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಹಾಗೂ ಬಿಜೆಪಿ ಸದಸ್ಯ ತೇಜಸ್ವಿನಿ ಗೌಡ ಮತ್ತಿತರ ಸದಸ್ಯರು ಮಾತನಾಡಿ, ಸದನದ ಗೌರವ ಕಾಪಾಡಿಕೊಳ್ಳುವ ಕಾರ್ಯವನ್ನ ಪ್ರತಿಯೊಬ್ಬ ಸದಸ್ಯರು ಮಾಡಬೇಕು. ಒಮ್ಮೊಮ್ಮೆ ಮಾತಿನ ಭರದಲ್ಲಿ ಮಾತುಗಳು ಹೇಳಿ ಬರುತ್ತವೆ. ಮಾತಿನ ಭರದಲ್ಲಿ ಕೆಲವೊಮ್ಮೆ ಅವಹೇಳನಕಾರಿ ಶಬ್ಧಗಳು ಹೊರ ಬೀಳುತ್ತವೆ. ಅದಕ್ಕೆ ಕ್ಷಮೆ ಕೇಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಈ ಬಳಿಕ ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ನಾನು ಅನಗತ್ಯವಾಗಿ ಸದನದ ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ. ಸದನದಲ್ಲಿ ನಾನು ನೆಹರು ಅವರ ಹೆಸರನ್ನ ಬಳಸಿ ಅವರಿಂದಲೇ ಭ್ರಷ್ಟಾಚಾರ ಆಗಿದೆ ಎಂದು ಹೇಳಿದ್ದಾರೆ ಅದಕ್ಕೆ ವಿಷಾದಿಸುತ್ತೇನೆ. ಎರಡನೆಯದಾಗಿ ರಮೇಶ್ ಕುಮಾರ್ ಭಾಷಣದಲ್ಲಿ ಅವರು ಏನು ಹೇಳಿದ್ದಾರೆ ಎಂಬುದನ್ನು ತಿಳಿಸಿದ್ದೇನೆ. ಕಾಂಗ್ರೆಸ್ ಸದಸ್ಯರಾಗಿ ನಾವು ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಗಳಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಜನರು ಹೇಗೆ ಅರ್ಥಮಾಡಿಕೊಂಡಿದ್ದರು ಅದೇ ರೀತಿ ನಾನು ಸಹ ಅರ್ಥ ಮಾಡಿಕೊಂಡಿದ್ದು ಮಾಧ್ಯಮಗಳಲ್ಲಿ ಇದು ದೊಡ್ಡ ಸುದ್ದಿಯಾಗಿ ಪ್ರಕಟವಾಗಿತ್ತು. ಉತ್ತರ ಕರ್ನಾಟಕ ಜನರ ಸಮಸ್ಯೆ ಚರ್ಚೆ ಆಗಬೇಕು ಎಂಬ ಉದ್ದೇಶದಿಂದ ನೆಹರು ವಿರುದ್ಧ ಆಡಿರುವ ಮಾತನ್ನು ಹಿಂಪಡೆಯುತ್ತೇನೆ ಎಂದರು.
ಪ್ರತಿಪಕ್ಷ ನಾಯಕರು ಹಾಗಾಗ ನಮ್ಮನ್ನು ಚುಚ್ಚಿ ಮಾತನಾಡುತ್ತಾರೆ. ನಾಗಪುರವನ್ನು ಹಾವಿನಪುರ ಎಂದು ಸಂಬೋಧಿಸುತ್ತಾರೆ. ಹಾವು ಅಂದರೆ ವಿಷ ಎಂಬ ಅರ್ಥ ಇರುತ್ತದೆ ಇದು ಎಲ್ಲರಿಗೂ ಬೇಸರ ತರುತ್ತದೆ. ನಾನು ನೆಹರು ಪದ ಬಳಕೆಯನ್ನು ಹಿಂಪಡೆಯುತ್ತೇನೆ. ಅದೇ ರೀತಿ ಅವರು ಹಾವಿನಪುರ ಎನ್ನುವ ಶಬ್ಧ ಬಳಕೆಯನ್ನು ನಿಲ್ಲಿಸುತ್ತಾರಾ? ನೆಹರು ಎಂದಾಗ ನಿಮಗೆ ಆಗುವಷ್ಟು ಬೇಸರ ಹಾವಿನಪುರ ಅಂದಾಗ ನಮಗೂ ಆಗುತ್ತದೆ. ನಾನು ಸಹ ನೆಹರು ಅನ್ನುವ ಪದವನ್ನು ಹಿಂಪಡೆಯುತ್ತೇನೆ. ಅದೇ ತರ ಅವರು ಹಾವಿನಪುರ ಎನ್ನುವ ಶಬ್ಧವನ್ನು ಹಿಂಪಡೆಯಲ್ಲಿ ಎಂದು ಮನವಿ ಮಾಡಿದರು.
ಇದನ್ನೂ ಓದಿ :ಪ್ರತಿಪಕ್ಷದ ಗದ್ದಲ ಮುಂದುವರಿಕೆ: ಮಾತುಕತೆಗೆ ಕಲಾಪವನ್ನು ಮುಂದೂಡಿದ ಸಭಾಪತಿ