ಬೆಳಗಾವಿ: ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಬಹಳಷ್ಟಿದೆ. ಅವರ ಹಿತ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ರಾಜ್ಯದಲ್ಲಿ ಶೇ.70ರಷ್ಟು ಪೌರ ಕಾರ್ಮಿಕರನ್ನು ಈಗಾಗಲೇ ಖಾಯಂಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಹಂತ ಹಂತವಾಗಿ ಎಲ್ಲರನ್ನು ಖಾಯಂಗೊಳಿಸಿ ನೇಮಕಾತಿ ಆದೇಶ ಪತ್ರ ನೀಡಲಾಗುವುದು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಭರವಸೆ ನೀಡಿದರು.
ನಗರಾಭಿವೃದ್ದಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಹಾಗೂ ಜಿಲ್ಲಾಡಳಿತ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ 368 ಪೌರಕಾರ್ಮಿಕರ ನೇಮಕಾತಿ ಆದೇಶಪತ್ರಗಳನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ಈಶ್ವರ್ ಖಂಡ್ರೆ ಅವರು ಪೌರಾಡಳಿತ ಸಚಿವರಿದ್ದ ಸಂದರ್ಭದಲ್ಲಿ ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಸೂಚಿಸಿದ್ದರು. ಅದರಂತೆ ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಆದೇಶ ಹೊರಡಿಸಿದ್ದರು ಎಂದು ಹೇಳಿದರು.
ಸುಮಾರು ಜನರು ಅನಧಿಕೃತ ಬಡಾವಣೆಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ತೆರಿಗೆ ಪಾವತಿಸದಿದ್ದರೂ ಅಂತಹ ಮನೆಗಳಿಗೆ ಮೂಲಸೌಕರ್ಯ ಒದಗಿಸಬೇಕಿದೆ. ಆದ್ದರಿಂದ ರಾಜ್ಯಾದ್ಯಂತ ಇರುವ ಮನೆಗಳಿಗೆ ಎ- ಖಾತಾ ಹಾಗೂ ಬಿ ಖಾತಾ ಮಾಡಿಕೊಡಲಾಗುವುದು. ಈ ಕುರಿತು ವಿವಿಧ ಸಚಿವರ ಉಪ ಸಂಪುಟ ಸಮಿತಿ ರಚಿಸಲಾಗಿದೆ. ಈಗಾಗಲೇ ನಾಲ್ಕು ಬಾರಿ ನಡೆದ ಸಭೆಗಳಲ್ಲಿ ಎ ಖಾತಾ, ಬಿ ಖಾತಾ ನೀಡಲು ತೀರ್ಮಾನಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಪ್ರಾರಂಭಿಸಲಾಗುವುದು ಎಂದು ಸಚಿವ ರಹೀಂ ಖಾನ್ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಜಿಲ್ಲೆಯ ಪೌರ ಕಾರ್ಮಿಕರಿಗೆ ನೇರ ನೇಮಕಾತಿ ಆದೇಶ ನೀಡುತ್ತಿರುವುದು ಸಂತಸದ ವಿಷಯ. ಬಹಳ ದಿನಗಳಿಂದ ಪೌರ ಕಾರ್ಮಿಕರ ಖಾಯಂಗೊಳಿಸುವ ಕುರಿತು ಹೋರಾಟಗಳನ್ನು ನೋಡಿದ್ದೇವೆ. ಅವರ ಬೇಡಿಕೆಗಳನ್ನು ಈಡೇರಿಸುವ ಭಾಗ್ಯ ಇಂದು ನಮ್ಮದಾಗಿದೆ ಎಂದರು.
ಪೌರಕಾರ್ಮಿಕರ ಯಾವುದೇ ಸಮಸ್ಯೆಗೆ ಸ್ಪಂದಿಸಲು ಸರ್ಕಾರ ಜಿಲ್ಲಾಡಳಿತ ಸಿದ್ಧವಿದೆ. ಜಿಲ್ಲೆಯಲ್ಲಿ ಇನ್ನೂ ಸುಮಾರು 400 ಕ್ಕಿಂತ ಹೆಚ್ಚು ಪೌರಕಾರ್ಮಿಕರನ್ನು ಖಾಯಂಗೊಳಿಸಿ ಆದೇಶ ನೀಡಬೇಕಿದೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವ ಕಾರಣ ಸ್ವಲ್ಪ ವಿಳಂಬವಾಗಿದೆ. ಆದರೆ ಸರ್ಕಾರ ಇದರ ಕಡೆಗೆ ಗಮನಹರಿಸಿ ನ್ಯಾಯ ಒದಗಿಸುವ ಕಾರ್ಯ ಮಾಡಲಿದೆ ಎಂದರು.