ಕರ್ನಾಟಕ

karnataka

ETV Bharat / state

ರಸ್ತೆ ಸುರಕ್ಷತೆ ದೃಷ್ಟಿಯಿಂದ ಸಕ್ಷಮ ಪ್ರಾಧಿಕಾರ ನಿರ್ಮಿಸಲು ಸಿದ್ಧ: ಸಚಿವ ಸಿ ಸಿ ಪಾಟೀಲ್ - ಜೆಡಿಎಸ್​ ಸದಸ್ಯ ಭೋಜೇಗೌಡರು

ಅಪಘಾತ ವಲಯಗಳಲ್ಲಿ ಸೂಕ್ತ ಭದ್ರತೆ ಒದಗಿಸಿಲ್ಲ. ಸೇವಾ ರಸ್ತೆ ನಿರ್ಮಿಸುತ್ತಿಲ್ಲ. ಅಪಘಾತ ಹೆಚ್ಚಾಗಿದೆ. ಸುರಕ್ಷತೆಗೆ ಒತ್ತು ಸಿಗಬೇಕು. ಪ್ರತಿಫಲಕಗಳು, ರಸ್ತೆ ಉಬ್ಬು ಸೂಕ್ತ ರೀತಿಯಲ್ಲಿ ಇಲ್ಲ. ಬಿಬಿಎಂಪಿ ಸಹ ಇತ್ತ ಗಮನ ಹರಿಸಬೇಕು ಎಂದು ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಸಚಿವ ಸಿ ಸಿ ಪಾಟೀಲ್
ಸಚಿವ ಸಿ ಸಿ ಪಾಟೀಲ್

By

Published : Dec 21, 2022, 9:01 PM IST

ರಸ್ತೆ ಸುರಕ್ಷತೆ ಕುರಿತು ಸಚಿವ ಸಿ ಸಿ ಪಾಟೀಲ್ ಅವರು ಉತ್ತರಿಸಿದರು

ಬೆಳಗಾವಿ:ರಸ್ತೆ ಸುರಕ್ಷತೆ ದೃಷ್ಟಿಯಿಂದ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧವಿದ್ದು, ಇದಕ್ಕಾಗಿ ಸಕ್ಷಮ ಪ್ರಾಧಿಕಾರ ರಚಿಸಲಿದೆ ಎಂದು ಲೋಕೋಪಯೋಗಿ ಸಚಿವ ಸಿ. ಸಿ ಪಾಟೀಲ್ ಅವರು ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿ, ನಿಯಮಾವಳಿ ಸಾಕಷ್ಟು ಇದೆ. ರಸ್ತೆ ಸುರಕ್ಷತೆಗೆ ಒತ್ತು ಕೊಡುತ್ತೇವೆ. ಸಕ್ಷಮ ಪ್ರಾಧಿಕಾರಕ್ಕೆ ತಿಪ್ಪೇಸ್ವಾಮಿ ಅವರನ್ನೇ ಸೇರಿಸಿಕೊಳ್ಳುತ್ತೇವೆ. ರಸ್ತೆ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ತಿಪ್ಪೇಸ್ವಾಮಿ ಮಾತನಾಡಿ, ಅಪಘಾತ ವಲಯಗಳಲ್ಲಿ ಸೂಕ್ತ ಭದ್ರತೆ ಒದಗಿಸಿಲ್ಲ. ಸೇವಾ ರಸ್ತೆ ನಿರ್ಮಿಸುತ್ತಿಲ್ಲ. ಅಪಘಾತ ಹೆಚ್ಚಾಗಿದೆ. ಸುರಕ್ಷತೆಗೆ ಒತ್ತು ಸಿಗಬೇಕು. ಪ್ರತಿಫಲಕಗಳು, ರಸ್ತೆ ಉಬ್ಬು ಸೂಕ್ತ ರೀತಿಯಲ್ಲಿ ಇಲ್ಲ. ಬಿಬಿಎಂಪಿ ಸಹ ಇತ್ತ ಗಮನ ಹರಿಸಬೇಕು. ಈ ಬಗ್ಗೆ ಗಮನ ಹರಿಸಬೇಕು ಎಂದರು.

ದಾವಣಗೆರೆ ರಸ್ತೆ ಅಭಿವೃದ್ಧಿ..ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್ ಕೇಳಿದ ಪ್ರಶ್ನೆಗೆ, ದಾವಣಗೆರೆಯಲ್ಲಿ ರಸ್ತೆ ಅಭಿವೃದ್ಧಿಗೆ 800 ಕೋಟಿಗೂ ಅಧಿಕ ಮೊತ್ತದ ಹಣ ನೀಡಿದ್ದೇವೆ. ಯಾವುದೇ ಸಮಸ್ಯೆ ಆಗದ ರೀತಿ ಎಸ್ಸಿಪಿ, ಟಿಎಸ್​ಪಿ ಅಡಿ ಸೂಕ್ತ ರೀತಿಯಲ್ಲಿ ರಸ್ತೆ ಅಭಿವೃದ್ಧಿ ಮಾಡುತ್ತೇವೆ ಎಂದರು. ದಾವಣಗೆರೆಯಲ್ಲಿ ಎಸ್ಸಿಪಿ, ಟಿಎಸ್​ಪಿ ಅಡಿ ನೀಡಿರುವ ಅನುದಾನ, ರಸ್ತೆ ನಿರ್ವಹಣೆ ಸರಿಯಾಗಿಲ್ಲ. ಆದರೆ ಟೋಲ್ ಸಂಗ್ರಹ ಆಗುತ್ತಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸಿದರು.

ರಸ್ತೆ ಸುರಕ್ಷತೆ ಕುರಿತು ಸಚಿವ ಸಿ ಸಿ ಪಾಟೀಲ್ ಅವರು ಉತ್ತರಿಸಿದರು

ಎಲ್ಲರಿಗೂ ಮನೆ..ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್ ಪ್ರಶ್ನೆಗೆ ಉತ್ತರಿಸಿದ ಸಚಿವ ಸೋಮಣ್ಣ, ರಾಜ್ಯದಲ್ಲಿ ಬಡವರಿಗೆ ಮನೆ ಕಟ್ಟಿಕೊಡಲು ಅಗತ್ಯ ಅನುದಾನ ನನ್ನ ಬಳಿ ಇದೆ. 1.5 ಕೋಟಿ ರೂ. ಮೊತ್ತ ಮೀಸಲಿಟ್ಟಿದ್ದೇವೆ. ನಾವು ಹಾಕಿಕೊಂಡ ಮನೆ ಕಟ್ಟಿಸುವ ಗುರಿ ಪೂರೈಸುತ್ತೇವೆ. 464 ಕೋಟಿ ರೂ. ಅನುದಾನ ಸಿಕ್ಕಿದೆ. ಉಳಿದ 300 ಕೋಟಿ ರೂ. ಬರಬೇಕಿದೆ. ಬಂದ ತಕ್ಷಣ ಫಲಾನುಭವಿಗಳಿಗೆ ಆರ್​ಟಿಜಿಎಸ್ ಮೂಲಕ ಕಳುಹಿಸಿಕೊಡುತ್ತೇವೆ ಎಂಬ ಭರವಸೆ ನೀಡಿದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿ, ಆಯಾ ಪಂಚಾಯಿತಿಗಳಿಂದ ನಮಗೆ ಮನವಿ ಬರಲಿದೆ. ಸಾಕಷ್ಟು ಪ್ರಕ್ರಿಯೆ ನಿಲ್ಲಿಸಿ, ಜನರಿಗೆ ಪಾರದರ್ಶಕವಾಗಿ ಮನೆ ಹಂಚಿಕೆ ಮಾಡುತ್ತೇವೆ. ಜಿಲ್ಲಾಧಿಕಾರಿ ಇಲ್ಲವೇ ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿಗಳು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಅವರದ್ದೇ ಪ್ರತ್ಯೇಕ ಸಮಿತಿ ರಚಿಸಿದ್ದೇವೆ. ಹಳೆಯ ಬೇಡಿಕೆ ಉಳಿಯದಂತೆ ನೋಡಿಕೊಳ್ಳುತ್ತೇವೆ. ಯಾವ ಬಡವರಿಗೂ ಸಮಸ್ಯೆ ಆಗಬಾರದು. ಅವಕಾಶ ಸಿಗಬೇಕೆನ್ನುವುದು ನಮ್ಮ ಆಶಯ ಎಂದರು.

ಬಿಜೆಪಿ ಸದಸ್ಯ ಚಲವಾದಿ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್, ಚರ್ಮಗಂಟು ರೋಗ ರಾಜಸ್ಥಾನ, ಗುಜರಾತ್​ನಿಂದ ಬಂದಿದೆ. 69 ಸಾವಿರ ಲಸಿಕೆ ರಾಜ್ಯದಲ್ಲಿ ನೀಡಿದ್ದೇವೆ. ವೈದ್ಯರ ಕೊರತೆ ಇಲ್ಲ. ಗ್ರಾಮೀಣ ಭಾಗದ ಜಾನುವಾರಿಗೆ ಸರಿಯಾಗಿ ಚಿಕಿತ್ಸೆ ಮಾಡುತ್ತಿದ್ದೇವೆ. ಒಟ್ಟು 4212 ಪಶು ಆಸ್ಪತ್ರೆ ಇದೆ. ಇದರ ಜತೆ ಸಂಚಾರಿ ಪಶು ಚಿಕಿತ್ಸಾಲಯ ಇದೆ. ನೂರಾರು ಕೋಟಿ ರೂ. ನಾವು ಚಿಕಿತ್ಸೆಗಾಗಿ ವೆಚ್ಚ ಮಾಡುತ್ತಿದ್ದೇವೆ. 400 ವೈದ್ಯರ ನೇಮಕ ಮಾಡಿದ್ದೇವೆ. ಇನ್ನೂ 250 ಮಂದಿ ವೈದ್ಯರ ನೇಮಕ ಆಗಬೇಕಿದೆ. ಆದಷ್ಟು ಶೀಘ್ರ ಸಮಸ್ಯೆ ನಿವಾರಿಸುತ್ತೇವೆ ಎಂಬ ವಿವರ ನೀಡಿದರು.

ಹೈನುಗಾರಿಕೆ ಖಾಯಿಲೆ ಸುಳಿಯಲ್ಲಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಜಾನುವಾರಿಗೆ ಕಾಡುವ ಗಂಟುರೋಗ ರೋಗಕ್ಕೆ ಸೂಕ್ತ ಔಷಧ ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಹಲವೆಡೆ ಇಂದು ವೈದ್ಯರ, ಔಷಧಗಳ ಕೊರತೆ ಇದೆ. ಇದನ್ನು ಸಚಿವರು ಗಮನ ಹರಿಸಬೇಕು ಎಂದರು.

ಕಂದಾಯ ಜಮೀನಿನಲ್ಲಿ ಮನೆ ಕಟ್ಟಲು ಅವಕಾಶ ಕಾನೂನಿನಲ್ಲಿ ಇಲ್ಲ. ಹಾಗಂತ ಫಾರಂಹೌಸ್ ಕಟ್ಟಲು ಅವಕಾಶ ಇದೆ. ಈ ಕಾನೂನು ಬದಲಾದರೆ ಅವಕಾಶ ಮಾಡಿಕೊಡಬಹುದು. ತೋಟದ ಮನೆ ಕಟ್ಟಲು ಮಾತ್ರ ಅವಕಾಶ ಇದೆ. ಕೃಷಿ ಚಟುವಟಿಕೆಗೆ ಬಳಸಿಕೊಳ್ಳುವ ಸಲಕರಣೆ ಇರಿಸಿಕೊಳ್ಳಲು ಅಂತ ಈ ಅವಕಾಶ ನೀಡಿರಬಹುದು. ಕೋಳಿ ಫಾರಂಗೂ ಹೀಗೆಯೇ ಪರಿವರ್ತಿಸಬೇಕು ಎಂದಿತ್ತು. ಇದೀಗ ನಾವು ಕೋಳಿ ಪಾರಂನ್ನು ಕೃಷಿ ವ್ಯಾಪ್ತಿಗೆ ಸೇರಿಸಿದ್ದೇವೆ. ಈ ಸದನದಲ್ಲೇ ಈ ಬಿಲ್ ಮಂಡನೆ ಆಗಲಿದೆ. ಕೇವಲ 7 ದಿನದಲ್ಲಿ ಭೂ ಪರಿವರ್ತನೆ ಮಾಡುವ ಅವಕಾಶ ಒದಗಲಿದೆ. ಕಾನೂನು ಇನ್ನಷ್ಟು ಸಡಿಲೀಕರಣವಾಗಲಿದೆ. ಸದಸ್ಯರ ಆಗ ಸಲಹೆ, ಸೂಚನೆ ನೀಡಬಹುದು ಎಂದು ಹೇಳಿದರು.

ಕಾಂಗ್ರೆಸ್ ಸದಸ್ಯರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಮನೆಗೆ ಅವಕಾಶ ಇಲ್ಲ, ಫಾರಂಹೌಸ್​ಗೆ ಹೇಗೆ ಅವಕಾಶ ಇದೆ. ವಿವರಣೆ ನೀಡಿ ಎಂದು ಸಲಹೆ ಇತ್ತರು. ಇದಕ್ಕೆ ಅಶೋಕ್ ಮಾತನಾಡಿ, ನಾವು ಸಹ ಇದನ್ನು ಬಯಸುತ್ತೇವೆ. ಸಮಸ್ಯೆ ನಿವಾರಣೆಗೆ ಶ್ರಮಿಸಬಹುದು. ಆದರೆ ಅವಕಾಶಕ್ಕೆ ಸಮಯ ಹಿಡಿಯಲಿದೆ ಎಂದು ತಿಳಿಸಿದರು.

ಪಶು ವಿವಿ ಅಕ್ರಮ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯಿತು. ಸಚಿವರು ಉಪಕುಲಪತಿಯನ್ನು ವಜಾಗೊಳಿಸಿದ್ದೇವೆ. ಇವರ ನೇಮಕ ಕಾಂಗ್ರೆಸ್ ಸರ್ಕಾರ ಇದ್ದಾಗ ಆಗಿತ್ತು ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದಾಗ ಕೆರಳಿದ ಪ್ರತಿಪಕ್ಷ ಸದಸ್ಯರು ಹಾಗೂ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ನಮ್ಮ ಅವಧಿಯಲ್ಲಿ ನೇಮಕವಾದ ಕುಲಪತಿ ನಿವೃತ್ತಿಯಾಗಿದ್ದಾರೆ. ಆದರೆ ಈಗ ಅಲ್ಲಿ ಉಳಿದ ಅಧಿಕಾರಿಗಳು ಅಕ್ರಮ ಎಸಗಿದ್ದು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಭಾಪತಿಗಳ ಸಲಹೆ ಮೇರೆಗೆ ನಂತರ ಸಚಿವರು, ಸದಸ್ಯರ ಸಭೆ ನಡೆಸಬೇಕೆಂಬ ಸಲಹೆ ನೀಡಿದರು.

ಎಲ್​ಎಸ್​ಡಿ..ಜೆಡಿಎಸ್​ ಸದಸ್ಯ ಭೋಜೇಗೌಡರು ಹಾಗೂ ಸಚಿವ ಪ್ರಭು ಚೌಹಾಣ್ ನಡುವೆ ಒಂದು ಸ್ವಾರಸ್ಯಕ ಚರ್ಚೆ ನಡೆಯಿತು. ಪಶು ಸಂಗೋಪನಾ ಸಚಿವರಿಗೆ ಪ್ರಶ್ನೆ ಮಾಡಿದ ಭೋಜೇಗೌಡರು ಎಲ್​ಎಸ್​ಡಿ ಅಂತ ಇದೆ. ಹಾಗಂದರೆ ಏನು ಎಂದು ಪ್ರಶ್ನಿಸಿದರು. ಅದಕ್ಕೆ ಸಚಿವರು ಚರ್ಮಗಂಟು ರೋಗ ಎಂದು ಹೇಳಿದರು. ಆದರೆ ನನಗೆ ಇಂಗ್ಲೀಷ್​ ಪದದ ವಿವರ ಕೊಡಿ ಎಂದರು. ಆದರೆ ಸಚಿವರು ತಡಬಡಾಯಿಸಿದರು.

ಅಧಿಕಾರಿಗಳಿಂದ ಕನ್ನಡ ಪದ ಬರೆಸಿ ತರಿಸಿಕೊಂಡು ಓದಲು ಮುಂದಾದಾಗ ಕಂದಾಯ ಸಚಿವ ಆರ್. ಅಶೋಕ್ ಅವರ ಸಹಾಯಕ್ಕೆ ಬಂದರು. ಸಚಿವರೇ ಹೇಳಲಿ ಅಂತ ಭೋಜೇಗೌಡರು ಹಠಕ್ಕೆ ಬಿದ್ದರು. ಆಗ ಆಡಳಿತ ಪಕ್ಷದ ಸದಸ್ಯರು ಸಚಿವರ ಪರ ನಿಂತರು. ಆಗ ಭೋಜೇಗೌಡರು, ನಾನು ಕೇಳಿದ್ದು ತಪ್ಪಾ? ಅನುಮಾನ ಬಗೆಹರಿಸಿ ಎಂದು ಕೇಳುವುದು ತಪ್ಪಾ? ಅಂತ ಕೇಳಿದರು. ಸಾಕಷ್ಟು ಗದ್ದಲ ಹೆಚ್ಚಾದಾಗ ಮಧ್ಯ ಪ್ರವೇಶಿಸಿದ ಸಭಾಪತಿಗಳು ನೀವು ಕೇಳಬೇಕಾದ ಪ್ರಶ್ನೆ ಮೊದಲು ಕೇಳಿ ಎಂದರು.

ಆಗ ಭೋಜೇಗೌಡರು ಚರ್ಮಗಂಟು ರೋಗದಿಂದಾಗಿ ಹಾಲಿನ ಉತ್ಪಾದನೆ ಕಡಿಮೆ ಆಗಿದೆ. ಅದರ ಹೆಚ್ಚಳಕ್ಕೆ ಕ್ರಮ ಆಗಬೇಕೆಂದು ಒತ್ತಾಯಿಸುತ್ತೇನೆ ಎಂದರು. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಭರವಸೆ ಕೊಟ್ಟರು. ಒಟ್ಟಾರೆ ಎಲ್​ಎಸ್​ಡಿ ಹಾಗೂ ಅದರ ಕನ್ನಡ ಪದ ಚರ್ಮ ಗಂಟು ರೋಗ ಪದದ ಮೇಲಿನ ಸ್ವಾರಸ್ಯಕರ ಚರ್ಚೆ ಒಂದು ಅತ್ಯುತ್ತಮ ವಿಚಾರದ ಮೇಲೆ ಒಂದಿಷ್ಟು ದೀರ್ಘ ಸಮಾಲೋಚನೆ ಹಾಗೂ ವಿಚಾರ ವಿನಿಮಯಕ್ಕೆ ನಾಂದಿಯಾಯಿತು. ಗಂಭೀರ ಚರ್ಚೆಗೆ ಸೀಮಿತವಾಗಿದ್ದ ಸದನದಲ್ಲಿ ನಗೆಬುಗ್ಗೆ ಚಿಮ್ಮಿತು.

ಓದಿ:ಮಲೆನಾಡು, ಕರಾವಳಿ ಭಾಗಗಳಲ್ಲಿ ಎಲೆಚುಕ್ಕಿ ರೋಗ : ವಿಧಾನಸಭೆಯಲ್ಲಿ ಗಂಭೀರ ಚರ್ಚೆ

ABOUT THE AUTHOR

...view details