ಬೆಳಗಾವಿ: 20 ನೇ ಶತಮಾನದಲ್ಲಿ ಪ್ರಚಲಿತವಾಗಿದ್ದ ಸಮಾಜದ ಮುಖ್ಯ ಪ್ರಶ್ನೆಗಳಾದ ಸ್ವಾತಂತ್ರ್ಯ ಹೋರಾಟ, ಆಧ್ಯಾತ್ಮಿಕ ಸಂಗತಿ, ಕಾರ್ಮಿಕ ಹೋರಾಟಗಳು, ಹೆಣ್ಣು-ಗಂಡಿನ ಸಂಬಂಧದ ಬಗ್ಗೆ ಕಟ್ಟಿಮನಿಯವರು ಬರೆದ ಕಥೆಗಳು, ಕಾದಂಬರಿಗಳು ತಿಳಿಸುತ್ತವೆ ಎಂದು ಮೈಸೂರಿನ ಪ್ರಸಿದ್ಧ ವಿಮರ್ಶಕ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಹೇಳಿದರು.
ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ವತಿಯಿಂದ ನಗರದ ಡಾ.ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅವರ ಕಾದಂಬರಿ, ಕಥಾ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ಯುವಸಾಹಿತ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಬರವಣಿಗೆ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇನೆ ಎಂದು ಹಟ ಸಾಧಿಸಿ ಕಥೆ, ಕಾದಂಬರಿಗಳನ್ನು ಬರೆದ ಮಹಾನ್ ವ್ಯಕ್ತಿ ಕಟ್ಟಿಮನಿಯವರು ಎಂದರು.