ಬೆಳಗಾವಿ:ರಾಜ್ಯದ ಅತಿ ದೊಡ್ಡ ಜಿಲ್ಲೆ ಬೆಳಗಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಡಿಸಿದ ಬಹುನಿರೀಕ್ಷಿತ ಬಜೆಟ್ನಲ್ಲಿ ಅಂದುಕೊಂಡಷ್ಟು ಅನುದಾನ, ಯೋಜನೆಗಳು ಘೋಷಣೆ ಆಗದೇ ಇರುವುದು ಜಿಲ್ಲೆಯ ಜನರನ್ನು ನಿರಾಸೆಗೊಳಿಸಿದೆ. 18 ಶಾಸಕರು, ಇಬ್ಬರು ಸಂಸದರು, ಓರ್ವ ರಾಜ್ಯಸಭಾ ಸದಸ್ಯ, ಐವರು ಪರಿಷತ್ ಸದಸ್ಯರು ಹಾಗೂ ಇಬ್ಬರು ಸಚಿವರನ್ನು ಒಳಗೊಂಡಿರುವ ರಾಜ್ಯದ ಅತಿ ದೊಡ್ಡ ಜಿಲ್ಲೆ ಬೆಳಗಾವಿ ಈ ಬಾರಿಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳನ್ನು ಹೊಂದಲಾಗಿತ್ತು. ಆದರೆ, ನಿರೀಕ್ಷೆಗೆ ತಕ್ಕಂತೆ ನುದಾನ, ಯೋಜನೆಗಳು ಘೋಷಣೆ ಆಗದಿರುವುದಕ್ಕೆ ಬೇಸರ ವ್ಯಕ್ತವಾಗಿದೆ. ಇಂದಿನ ಬಜೆಟ್ ಬಗ್ಗೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಬಜೆಟ್ನಲ್ಲಿ ಬೆಳಗಾವಿಗೆ ಸಿಕ್ಕಿದ್ದಿಷ್ಟು!
- 4 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ ಸೇರಿದಂತೆ ರಾಮನಗರ, ದಾವಣಗೆರೆ ಕಲಬುರಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಯುವ ಜನರಿಗೆ ಕೌಶಲ್ಯ ತರಬೇತಿ ಪ್ರಾರಂಭ.
- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯಗಳು, ಸಂಶೋಧನಾ ಕೇಂದ್ರ ಮತ್ತು ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು ಹಾಗೂ ಕಲಬುರಗಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ (Allied Health Sciences) ಕಾಲೇಜುಗಳ ಸ್ಥಾಪನೆ.
- ಬೆಳಗಾವಿ ಸೇರಿದಂತೆ ಮೈಸೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಕಾರ್ಯಾರಂಭಿಸಲು ಮತ್ತು ಸುಟ್ಟ ಗಾಯಗಳ ಘಟಕ ಸ್ಥಾಪನೆಗೆ 155 ಕೋಟಿ ರೂ. ನೆರವು.
- ಮಹದಾಯಿ ನ್ಯಾಯಾಧಿಕರಣದಿಂದ ಕಳಸಾ ಮತ್ತು ಬಂಡೂರಾ ನಾಲಾ ತಿರುವು ಕುಡಿಯುವ ನೀರಿನ ಯೋಜನೆಗೆ ಹಂಚಿಕೆಯಾದ 3.90 ಟಿ.ಎಂ.ಸಿ. ನೀರಿನ ಬಳಕೆಗಾಗಿ ಈಗಾಗಲೇ ಕೇಂದ್ರ ಜಲ ಆಯೋಗದ ತೀರುವಳಿ ದೊರಕಿದ್ದು, ಅವಶ್ಯಕವಿರುವ ಅರಣ್ಯ ತೀರುವಳಿ ಪಡೆದು, ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಯತ್ನ.
- ರಾಜ್ಯದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 172 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇವುಗಳಲ್ಲಿ 19 ಕೆರೆ ತುಂಬಿಸುವ ಯೋಜನೆಗಳನ್ನು 770 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ 899 ಕೆರೆಗಳಿಗೆ ನೀರು ತುಂಬಿಸಲಾಗುವುದು.
- ಕಿತ್ತೂರು ಕರ್ನಾಟಕ ಭಾಗದಲ್ಲಿನ ಸವದತ್ತಿ ಯಲ್ಲಮ್ಮನ ಗುಡ್ಡ, ದೇವರಗುಡ್ಡ, ಕಪ್ಪತ್ತಗುಡ್ಡ, ಬಾದಾಮಿ ಬನಶಂಕರಿ, ಲಕ್ಕುಂಡಿ ಪ್ರವಾಸಿ ತಾಣಗಳನ್ನು ಮತ್ತು ಗದಗ ಜಿಲ್ಲೆಯ ಮಾಗಡಿ ಪಕ್ಷಿಧಾಮವನ್ನು ಸಮಗ್ರವಾಗಿ ಅಭಿವೃದ್ಧಿ.
- ರಾಜ್ಯದಲ್ಲಿರುವ ರಾಷ್ಟ್ರೀಯ ಸಂರಕ್ಷಿತ ಸ್ಮಾರಕಗಳಾದ ಹಂಪಿಯ ವಿಜಯವಿಠಲ ದೇವಸ್ಥಾನ, ಕಿತ್ತೂರು ಕೋಟೆ, ಬೀದರ್ ಕೋಟೆ, ನಂದಿಬೆಟ್ಟದ ಶ್ರೀ ಭೋಗನಂದೀಶ್ವರ ದೇವಸ್ಥಾನ, ವಿಜಯಪುರದ ಗೋಲಗುಂಬಜ್ ಮತ್ತು ಬಾದಾಮಿ ಗುಹೆಗಳ ಬಳಿ ರಾತ್ರಿ ವೇಳೆ ಪ್ರವಾಸಿಗರ ಭೇಟಿಯನ್ನು ಉತ್ತೇಜಿಸಲು ಹಾಗೂ ಕರ್ನಾಟಕ ರಾಜ್ಯದ ಕಲೆ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಪ್ರದರ್ಶಿಸಲು 3D ಪ್ರೊಜೆಕ್ಷನ್, ಮಲ್ಟಿಮೀಡಿಯಾ, ಸೌಂಡ್ ಮತ್ತು ಲೈಟ್ ಶೋ ಯೋಜನೆ.
- ಪ್ರಸಕ್ತ ಸಾಲಿನಲ್ಲಿ ಕುಲಹಳ್ಳಿ-ಹನ್ನೂರು, ತಿಮ್ಮಾಪುರ, ಸಸಾಲಟ್ಟಿ-ಶಿವಲಿಂಗೇಶ್ವರ ಮತ್ತು ಮಂಟೂರು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಸುಮಾರು 39,134 ಹೆಕ್ಟೇರ್ ಅಚ್ಚುಕಟ್ಟು ಸ್ಥಿರೀಕರಣ ಮಾಡಲಾಗುವುದು ಎಂದು ಸಿಎಂ ಇಂದಿನ ಬಜೆಟ್ನಲ್ಲಿ ಪ್ರಸ್ತಾಪ ಮಾಡಿದ್ದಾರೆ.
ಈ ಮೇಲಿನ ಅನುದಾನವಷ್ಟೇ ಬೆಳಗಾವಿ ಜಿಲ್ಲೆಗೆ ಸಿಕ್ಕಿದ್ದು, ಈ ಹಿಂದಿನ ಬೊಮ್ಮಾಯಿ ಸರ್ಕಾರ ಬೆಳಗಾವಿಯಲ್ಲಿ ಕಿದ್ವಾಯಿ ಆಸ್ಪತ್ರೆ ನಿರ್ಮಾಣಕ್ಕೆ ಇಟ್ಟಿದ್ದ 150 ಕೋಟಿ ರೂ. ಅನುದಾನದಲ್ಲಿ 50 ಕೋಟಿ ರೂ. ಕಡಿತಗೊಳಿಸಲಾಗಿದೆ. ಸುವರ್ಣಸೌಧಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಯಾವುದೇ ರೀತಿ ಘೋಷಣೆ ಆಗಿಲ್ಲ. ಇನ್ನು ಜಿಲ್ಲೆಯಲ್ಲಿ ನೀರಾವರಿ, ಕೈಗಾರಿಕೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಕೊಡದೇ ಇರುವುದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ನಾವು ಕೇಳಿದ್ದು ಬೆಟ್ಟದಷ್ಟು, ಆದರೆ, ಕೊಟ್ಟಿದ್ದು ಮಾತ್ರ ಸಾಸಿವೆಯಷ್ಟು ಎಂದು ಜಿಲ್ಲೆಯ ಜನ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಬಜೆಟ್ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ, ಕಳಸಾ ಬಂಡೂರಿ, ಮಹದಾಯಿ ಯೋಜನೆಗಳಿಗೆ ಎಷ್ಟು ಅನುದಾನ ಕೊಟ್ಟರು ಎಂಬುದನ್ನು ಪ್ರಸ್ತಾಪಿಸಿಲ್ಲ. ಆಧ್ಯತೆಯ ಮೇರೆಗೆ ಕಾಮಗಾರಿ ಕೈಗೊಳ್ಳಲಾಗುವುದು ಎಂದಷ್ಟೇ ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ಕೊಟ್ಟು ಈ ಯೋಜನೆಗಳನ್ನು ಪೂರ್ಣಗೊಳಿಸಬೇಕು.