ಬೆಳಗಾವಿ: ಎರಡು ದಿನಗಳ ಕ್ರಾಂತಿ ವೀರ ಸಂಗೋಳಿ ರಾಯಣ್ಣ ಉತ್ಸವಕ್ಕೆ ಅದ್ಧೂರಿಯಾಗಿ ಶಾಸಕ ಮಹಾಂತೇಶ ಕೌಜಲಗಿ ಚಾಲನೆ ನೀಡಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ನಂತರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪೂಜೆ ನೆರವೇರಿಸಲಾಯಿತು. ಗ್ರಾಮ ಪಂಚಾಯತಿ ಆವರಣದಿಂದ ಆರಂಭಗೊಂಡ ಜಾನಪದ ಕಲಾವಾಹಿನಿಯು ಗ್ರಾಮದಲ್ಲಿ ಸಂಚರಿಸಿತು. ಸಂಗೊಳ್ಳಿ ರಾಯಣ್ಣನ ಭಾವಚಿತ್ರದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜಗ್ಗಲಗಿ ಮೇಳ, ಗೊಂಬೆ ಕುಣಿತ ಮತ್ತಿತರ ಕಲಾ ತಂಡಗಳು ಆಕರ್ಷಣೀಯವಾಗಿದ್ದವು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಕಲಾವಾಹಿನಿಯ ಜತೆಗೆ ಹೆಜ್ಜೆ ಹಾಕಿದರು.
ವಸ್ತು ಪ್ರದರ್ಶನ ಮೇಳಕ್ಕೆ ಚಾಲನೆ: ಮೇಳವನ್ನು ಶಾಸಕ ಮಹಾಂತೇಶ ಕೌಜಲಗಿ ಅವರು ಉದ್ಘಾಟಿಸಿದರು. ವಸ್ತು ಪ್ರದರ್ಶನ ಮೇಳದಲ್ಲಿರುವ ಆರೋಗ್ಯ ಇಲಾಖೆಯ ಮಳಿಗೆಗೆ ಭೇಟಿ ನೀಡಿದ ಶಾಸಕರು, ರಾಷ್ಟ್ರೀಯ ಪಲ್ಸ್ ಪೊಲಿಯೋ ಜಾಗೃತಿ ಕುರಿತ ಕರ ಪತ್ರಗಳನ್ನು ವೀಕ್ಷಿಸಿದರು.
ಆಯುಷ್ಮಾನ್ ಭಾರತ, ಕ್ಷಯರೋಗ ನಿಯಂತ್ರಣ, ಕುಷ್ಠರೋಗ ನಿವಾರಣೆ, ರಕ್ತಹೀನತೆ ನಿವಾರಣೆ, ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ಬಗ್ಗೆ ಜನಜಾಗೃತಿ ಮೂಡಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಅದೇ ರೀತಿ ರೈತ ಸಂಪರ್ಕ ಕೇಂದ್ರದ ಮಳಿಗೆ, ರೇಷ್ಮೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ವಸ್ತುಪ್ರದರ್ಶನ ಮಳಿಗೆಗಳನ್ನು ಶಾಸಕ ಮಹಾಂತೇಶ ಕೌಜಲಗಿ ಭೇಟಿ ನೀಡಿದರು.