ಕರ್ನಾಟಕ

karnataka

ETV Bharat / state

ಬೆಳಗಾವಿ: ಜಿಲ್ಲಾಡಳಿತದಿಂದ ಏಕಕಾಲಕ್ಕೆ 135 ಗ್ರಾಮಗಳಲ್ಲಿ ರ‍್ಯಾಪಿಡ್ ಟೆಸ್ಟ್ - Rapid test in belgavi

ಕೋವಿಡ್ ತ್ವರಿತ ಪತ್ತೆಗಾಗಿ ಎಲ್ಲ ಗ್ರಾಮಗಳಲ್ಲಿ ರ‍್ಯಾಪಿಡ್ ಟೆಸ್ಟ್​ ನಡೆಸಲು ನಿರ್ಧರಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

District Collector M G Hiremath
ಜಿಲ್ಲಾಧಿಕಾರಿ ಎಂ ಜಿ ಹಿರೇಮಠ

By

Published : May 24, 2021, 7:54 PM IST

ಬೆಳಗಾವಿ:ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ತ್ವರಿತ ಪತ್ತೆಗಾಗಿ ಆಯಾ ಗ್ರಾಮಗಳಲ್ಲಿಯೇ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ (ರ‍್ಯಾಟ್) ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಹುಕ್ಕೇರಿ ತಾಲೂಕಿನ ಹುಲ್ಲೊಳ್ಳಿ ಹಾಗೂ‌ ಹತ್ತರಗಿ ಗ್ರಾಮದಲ್ಲಿ ಸೋಮವಾರ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ (ರ‍್ಯಾಟ್​)ಗೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ತ್ವರಿತ ಪತ್ತೆಗಾಗಿ ಎಲ್ಲ ಗ್ರಾಮಗಳಲ್ಲಿ ರ‍್ಯಾಟ್ ನಡೆಸಲು ನಿರ್ಧರಿಸಲಾಗಿದ್ದು, ಮೊದಲ ದಿನವೇ ಜಿಲ್ಲೆಯ 135 ಗ್ರಾಮಗಳಲ್ಲಿ ಏಕಕಾಲಕ್ಕೆ ರ‍್ಯಾಟ್ ಶಿಬಿರ ನಡೆಸಲಾಗಿದೆ ಎಂದರು.

ಉಳಿದ ಗ್ರಾಮಗಳಲ್ಲೂ ಕೂಡ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ನಡೆಸಲಾಗುವುದು. ಇದಕ್ಕಾಗಿ ಜಿಲ್ಲೆಯ ಪ್ರತಿ ಗ್ರಾಮಕ್ಕೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು, ಗ್ರಾಮ ಪಂಚಾಯತಿ ಟಾಸ್ಕ್ ಫೋರ್ಸ್ ಮೂಲಕ ರ‍್ಯಾಟ್​ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕೋವಿಡ್ ಪರೀಕ್ಷೆ ಮತ್ತು ವರದಿ ವಿಳಂಬವಾಗುತ್ತಿರುವುದರಿಂದ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರಾಮಗಳಲ್ಲಿಯೇ ಕೋವಿಡ್ ಪರೀಕ್ಷೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಸೋಂಕಿನ ಲಕ್ಷಣ ಹೊಂದಿರುವವರು ಮತ್ತು ಸೋಂಕಿತರ ಸಂಪರ್ಕಿತರನ್ನು ಆಯಾ ಗ್ರಾಮಗಳಲ್ಲಿಯೇ ಪರೀಕ್ಷಿಸಲಾಗುವುದು. ರ‍್ಯಾಟ್ ನಲ್ಲಿ ಸೋಂಕು ದೃಢಪಟ್ಟರೆ ಅಂತವರನ್ನು ತಕ್ಷಣವೇ ಸ್ಥಳೀಯ ಕೋವಿಡ್ ಕೇರ್ ಕೇಂದ್ರಗಳಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಮದ ಇಬ್ಬರಲ್ಲಿ ಸೋಂಕು ಪತ್ತೆ: ಹುಕ್ಕೇರಿ ತಾಲೂಕಿನ ಹುಲ್ಲೋಳಿಯಲ್ಲಿ 39 ಜನರಿಗೆ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದಾಗ ಅದರಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಯಿತು. ಇಬ್ಬರನ್ನೂ ತಕ್ಷಣವೇ ಕೋವಿಡ್ ಕೇರ್ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು.‌ ಇನ್ನುಳಿದ 37 ಜನರ ವರದಿ ನೆಗೆಟಿವ್ ಬಂದಿದ್ದರೂ ಒಂದು ವೇಳೆ ಲಕ್ಷಣಗಳು ಕಂಡುಬಂದರೆ ಅಂತವರ ಮಾದರಿಯನ್ನು ಆರ್​ಟಿಪಿಸಿಆರ್​ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಮನೆ ಮನೆಗೆ ತೆರಳಿ ಕೋವಿಡ್ ಜಾಗೃತಿ: ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು, ಹುಲ್ಲೋಳಿ ಗ್ರಾಮದಲ್ಲಿ ಸಂಚರಿಸಿ ಕೋವಿಡ್ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು. ಗ್ರಾಮ ಪಂಚಾಯತಿ ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಜತೆ ಚರ್ಚೆ ನಡೆಸಿದ ಅವರು, ಸೋಂಕಿತರ ಮನವೊಲಿಸುವ ಮೂಲಕ ಕೂಡಲೇ ಅವರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಬೇಕು ಎಂದು ಹೇಳಿದರು.

ಓದಿ:ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಮಾರ್ಟ್‌ಫೋನ್ ವಿತರಣೆ: ಸುರೇಶ್ ಕುಮಾರ್

ABOUT THE AUTHOR

...view details