ಬೆಳಗಾವಿ: ದುರಾಡಳಿತ, ಭ್ರಷ್ಟಾಚಾರದಲ್ಲಿ ಯಡಿಯೂರಪ್ಪ ಸರ್ಕಾರ ನಂಬರ್ ಒನ್. ಕೇವಲ ಭ್ರಷ್ಟಾಚಾರ ಬಿಎಸ್‌ವೈ ಸರ್ಕಾರದ ಆಡಳಿತ ಕಾರ್ಯವೈಖರಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದ ಆಡಳಿತ ನಡೆಸುತ್ತಿದ್ದು, ದುರಾಡಳಿತ, ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದೆ. ಕರ್ನಾಟಕದಲ್ಲಿ ಜನರ ಮತದಿಂದ ಈ ಸರ್ಕಾರ ಬಂದಿಲ್ಲ, ಇದೊಂದು ಅನೈತಿಕ ಸರ್ಕಾರ. ಪ್ರಜಾಪ್ರಭುತ್ವ ಕೊಲೆಗೈದು ಸರ್ಕಾರ ರಚಿಸಲಾಗಿದೆ. ಕರ್ನಾಟಕ ಅಭಿವೃದ್ಧಿಗೆ ಈ ಸರ್ಕಾರ ಬ್ರೇಕ್ ಹಾಕಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರು ಮಾತನಾಡಿದರು ಈಶ್ವರಪ್ಪ, ಯತ್ನಾಳ್ರದ್ದು ತಪ್ಪಿದ್ರೆ ವಜಾ ಮಾಡಲಿ :
ದೇಶದಲ್ಲೇ ಮೊದಲ ಬಾರಿಗೆ ಹಿರಿಯ ಸಚಿವರೊಬ್ಬರು ಸಿಎಂ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈಶ್ವರಪ್ಪನವರದ್ದು ತಪ್ಪಿದ್ರೆ ಅವರನ್ನು ವಜಾ ಮಾಡಬೇಕು, ಮುಖ್ಯಮಂತ್ರಿಯದ್ದು ತಪ್ಪಿದ್ರೆ ಅವರು ರಾಜೀನಾಮೆ ನೀಡಲಿ. ಇಬ್ಬರಲ್ಲಿ ಒಬ್ಬರದ್ದು ತಪ್ಪಿರಲೇಬೇಕು, ದೆಹಲಿ ಬಿಜೆಪಿ ನಾಯಕರು ಯಾಕೆ ಸುಮ್ಮನೆ ಇದ್ದಾರೆ. ಬಿಜೆಪಿ ಶಾಸಕ ಯತ್ನಾಳ್ ವಿಜಯೇಂದ್ರ ಅವರ ಟ್ಯಾಕ್ಸ್ ಬಗ್ಗೆ ಮಾತನಾಡ್ತಾರೆ. ಯತ್ನಾಳ್ ಅವರದ್ದು ತಪ್ಪಿದ್ರೆ ಅವರನ್ನೇಕೆ ಪಕ್ಷದಿಂದ ವಜಾ ಮಾಡ್ತಿಲ್ಲ? ಬಿ.ಸಿ ಪಾಟೀಲ್, ಸುಧಾಕರ್ ಕ್ಷಮೆ ಕೇಳುವ ಪರಿಸ್ಥಿತಿ ಬಂದಿದೆ. ಇದು ಸರ್ಕಾರವಾ ಅಥವಾ ಸರ್ಕಸ್ ನಡೆಸುತ್ತಿದ್ದೀರಾ...? ಈ ಸರ್ಕಸ್ ರಾಜ್ಯದ ಅಭಿವೃದ್ಧಿ ಹೇಗೆ ಮಾಡುತ್ತೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಭರವಸೆ ನೀಡಿ, ಉಲ್ಟಾ ಹೊಡಿದಿದ್ದೇಕೆ ..?
ವಾಲ್ಮೀಕಿ, ಕೋಲಿ, ಕುರುಬ ಸಮಾಜದವರು ಎಸ್ಟಿ ಮೀಸಲಾತಿಗೆ, ಪಂಚಮಸಾಲಿ ಸಮುದಾಯದವರು 2ಎ ಮೀಸಲಾತಿಗೆ ಬೇಡಿಕೆ ಇಟ್ಟಿದ್ದಾರೆ. ಮರಾಠಾ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಸರ್ಕಾರ ಮರೆತಿದೆ. ಮೊದಲು ಭರವಸೆ ನೀಡಿ, ಈಗ ಉಲ್ಟಾ ಹೊಡೆದಿದೆ. ಸಾರಿಗೆ ಇಲಾಖೆ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೊದಲು 6ನೇ ವೇತನ ಆಯೋಗ ಜಾರಿ ಮಾಡಲಿ, ಸಾರಿಗೆ ನೌಕರರು ಕರ್ನಾಟಕದ ಮಕ್ಕಳಲ್ವೇ..? ಅವರನ್ನು ಕೆಲಸದಿಂದ ಕಿತ್ತು ಹಾಕಲಾಗುತ್ತಿದೆ. ಎಸ್ಮಾ ಜಾರಿ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ರೈತರು ದೆಹಲಿಯಿಂದ ಕರ್ನಾಟಕದವರೆಗೆ ಪ್ರತಿಭಟನೆ ಮಾಡ್ತಿದ್ದಾರೆ. ಮೊದಲ ಬಾರಿಗೆ ಕೃಷಿ ವಲಯದ ಮೇಲೆ ತೆರಿಗೆ ವಿಧಿಸಿದ್ದಾರೆ. ಕೃಷಿ ಉಪಕರಣ ಹಾಗೂ ಗೊಬ್ಬರದ ಮೇಲೆ ತೆರಿಗೆ ವಿಧಿಸಿದ್ದೇಕೆ..? ಕಾರ್ಪೊರೇಟ್ ಸೆಕ್ಟರ್‌ಗೆ ತೆರಿಗೆ ವಿನಾಯಿತಿ ಕೊಡ್ತೀರಿ ರೈತರಿಗೆ ಏಕಿಲ್ಲ? ಅಂಗನವಾಡಿ ಕಾರ್ಯಕರ್ತರು, ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
ಮುಳುಗುತ್ತಿರುವ ಹಡಗಲ್ಲ, ಉದಯಿಸುತ್ತಿರುವ ಸೂರ್ಯ :
ಕಾಂಗ್ರೆಸ್ ಮುಳಗುತ್ತಿರುವ ಹಡಗು ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಮುಳುಗುತ್ತಿರುವ ಹಡಗಲ್ಲ, ಉದಯಿಸುತ್ತಿರುವ ಸೂರ್ಯ. ಕಾಂಗ್ರೆಸ್ ಸೂರ್ಯ ಇದ್ದಂತೆ, ಮತ್ತೊಮ್ಮೆ ಉದಯ ಆಗುತ್ತದೆ. ನಾನು ಕುರುಕ್ಷೇತ್ರದಿಂದ ಬಂದವನು. ಬಿಜೆಪಿಯವರು ದುರ್ಯೋಧನನಂತೆ ಪ್ರಜಾಪ್ರಭುತ್ವದ ಶೀಲಹರಣ ಮಾಡ್ತಿದ್ದಾರೆ. ಮಹಾಭಾರತದಲ್ಲಿ ದುರ್ಯೋಧನ ಹೇಗಿದ್ದನೋ, ಕೃಷ್ಣನೂ ಇದ್ದ. ನಾವು ಕೃಷ್ಣ ಇದ್ದಂತೆ ಎಂದು ಸುರ್ಜೇವಾಲ ಹೇಳಿದರು.