ಬೆಳಗಾವಿ :ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ ವಿರುದ್ಧ ಸುಮಾರು 25,000 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ರಮೇಶ್ ಜಾರಕಿಹೊಳಿ 1,05,313 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ ಅವರು 79,901 ಮತಗಳನ್ನು ಪಡೆದಿದ್ದಾರೆ.
ಒಂದು ಸರ್ಕಾರ ಪತನಗೊಳಿಸಿ ಮತ್ತೊಂದು ಸರ್ಕಾರ ರಚಿಸುವಷ್ಟು ಸಾಮರ್ಥ್ಯ ಹೊಂದಿರುವ ರಮೇಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿದ್ದಾರೆ. ಹಠಕ್ಕೆ ಬಿದ್ದರೆ ಛಲದಂಕ ಮಲ್ಲನಂತೆ ವಿರೋಧಿಗಳ ವಿರುದ್ಧ ಜಿದ್ದು ಸಾಧಿಸುವ ವ್ಯಕ್ತಿತ್ವ ಇವರದ್ದು. ಜಾರಕಿಹೊಳಿ ಕುಟುಂಬದ ಹಿರಿಯ ಸಹೋದರ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಯಾವ ರೀತಿಯ ಪ್ರಭಾವ ಹೊಂದಿದ್ದರೋ ಅದೇ ರೀತಿ ಬಿಜೆಪಿಯಲ್ಲೂ ತಮ್ಮ ಪ್ರಭಾವ ಹೊಂದಿದ್ದಾರೆ. ಗೋಕಾಕ್ ಕ್ಷೇತ್ರದಿಂದ ಸತತ ಆರು ಬಾರಿ ಗೆದ್ದಿರುವ ರಮೇಶ್ ಜಾರಕಿಹೊಳಿ ಸೋಲಿಲ್ಲದ ಸರದಾರನಾಗಿದ್ದಾರೆ.
1960ರ ಮೇ 1ರಂದು ಗೋಕಾಕ್ ಪಟ್ಟಣದಲ್ಲಿ ಲಕ್ಷ್ಮಣರಾವ್ ಮತ್ತು ಭೀಮವ್ವ ದಂಪತಿಗಳ ಮಗನಾಗಿ ರಮೇಶ ಜಾರಕಿಹೊಳಿ ಜನಿಸಿದರು. ಗೋಕಾಕ್ ನಲ್ಲಿಯೇ ಪ್ರಾಥಮಿಕ, ಮಾಧ್ಯಮಿಕ, ಪದವಿ ಪೂರ್ವ ಶಿಕ್ಷಣ ಪಡೆದರು. ಅಲ್ಲದೇ ಬಿಎ ಮೊದಲ ವರ್ಷದವರೆಗೂ ಕಾಲೇಜಿಗೆ ಹೋದ ರಮೇಶ್ ಬಳಿಕ ಶಿಕ್ಷಣಕ್ಕೆ ಗುಡ್ ಬೈ ಹೇಳಿ ಉದ್ಯಮಕ್ಕೆ ಕಾಲಿಟ್ಟರು. ಬಳಿಕ ರಾಜಕಾರಣದ ಕಡೆ ಮುಖ ಮಾಡಿದರು.
ರಮೇಶ್ ಜಾರಕಿಹೊಳಿ ಮತ್ತು ಜಯಶ್ರೀ ದಂಪತಿಗೆ ಸಂತೋಷ್, ಅಮರನಾಥ ಎಂಬ ಪುತ್ರರಿದ್ದು, ಓರ್ವ ಪುತ್ರಿ ಇದ್ದಾರೆ. ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ರಮೇಶ್ ಜಾರಕಿಹೊಳಿ, ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾದ ಬಳಿಕ ರಾಜ್ಯದಲ್ಲಿ ಮತ್ತಷ್ಟು ಪ್ರಭಾವಿಯಾಗಿ ಬೆಳೆದರು.