ಚಿಕ್ಕೋಡಿ:ದಿ. ಸುರೇಶ್ ಅಂಗಡಿಯವರ ಪತ್ನಿಗೆ ಲೋಕಸಭಾ ಟಿಕೆಟ್ ಕೊಡುವ ವಿಚಾರ ನನಗೆ ಗೊತ್ತಿಲ್ಲ. ನಮ್ಮ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಏನ್ ತೀರ್ಮಾನ ತೆಗೆದುಕೊಳ್ತಾರೋ ಅದಕ್ಕೆ ನಾವು ಬದ್ಧ. ನಾವು ಪಕ್ಷದ ಸಿದ್ಧಾಂತದ ಮೇಲೆ ಕೆಲಸ ಮಾಡುತ್ತೇವೆ. ಲೋಕಸಭಾ ಟಿಕೆಟ್ ವಿಚಾರ ನಮ್ಮ ವರಿಷ್ಠರು ಅಂತಿಮ ತೀರ್ಮಾನ ಮಾಡ್ತಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಸುರೇಶ ಅಂಗಡಿಯವರು ಬಹಳ ಒಳ್ಳೆಯ ಮನುಷ್ಯ, ಅವರ ಸಾವು ನಮಗೆಲ್ಲರಿಗೂ ಸೇರಿದಂತೆ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು.
ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಎಲ್ಲಾ ಮುಖಂಡರ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಕಚೇರಿ ಸ್ಥಳಾಂತರ ಬಗ್ಗೆ ಕೇಳಿದ್ದಾರೆ. ಮೊದಲು ಅದನ್ನ ಮಾಡ್ತೀವಿ, ಗೋಕಾಕ್, ಚಿಕ್ಕೋಡಿ ಜಿಲ್ಲೆಯ ಕೂಗು ಇದೆ. ಅದರ ಬಗ್ಗೆ ಚರ್ಚೆ ಆಗಬೇಕಿದೆ. ಗಡಿ ವಿಚಾರ ಕೋರ್ಟ್‌ನಲ್ಲಿ ಪ್ರಕರಣ ಇರೋದ್ರಿಂದ ಸಮಸ್ಯೆ ಇದೆ. ಚಿಕ್ಕೋಡಿ, ಗೋಕಾಕ್ ಜಿಲ್ಲೆ ಆಗಬೇಕೆಂದು ನಮ್ಮದು ಆಗ್ರಹ ಇದೆ ಎಂದು ಹೇಳಿದರು.