ಚಿಕ್ಕೋಡಿ (ಬೆಳಗಾವಿ) : 14 ತಿಂಗಳು ಹೋರಾಡಿ ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಆದರೆ ಅನರ್ಹಗೊಂಡೆವು. ನಂತರ ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದು ಮಂತ್ರಿಯಾದೆವು. 2023ರಲ್ಲಿ ಮತ್ತೆ ಟಿಕೆಟ್ ಕೊಡುವುದಾಗಿ ಹೈಕಮಾಂಡ್ ಮಾತು ಕೊಟ್ಟಿದ್ದರೂ ಈಗಿನ ಕಾಂಗ್ರೆಸ್ ಅಭ್ಯರ್ಥಿಗೆ ಅನ್ಯಾಯ ಆಗಿದೆ ಎನ್ನುತ್ತಿದ್ದಾರೆ ಎಂದು ಅಥಣಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಕೇಂದ್ರ ಸಚಿವ ಅಮಿತ್ ಶಾ ಪ್ರಚಾರ ಕಾರ್ಯ ನಡೆಸಿದರು. ಈ ವೇಳೆ ಪ್ರಚಾರ ಸಮಾರಂಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಜವಾಗಿಯೂ ಅನ್ಯಾಯ ಆಗಿದ್ದು ಮಹೇಶ್ ಕುಮಟಳ್ಳಿಗೆ. ಆದರೆ ಲಕ್ಷ್ಮಣ ಸವದಿ ಅವರಿಗೆ ಅನ್ಯಾಯ ಆಗಿದೆ ಎಂದು ಹೇಳುತ್ತಿದ್ದಾರೆ. ಸೋತರೂ ಸವದಿ ಅವರಿಗೆ ಪಕ್ಷ ಎಲ್ಲಾ ಸ್ಥಾನಮಾನವನ್ನು ಬಿಜೆಪಿ ಕೊಟ್ಟಿತ್ತು. ಆದರೆ ಇವತ್ತು ನೋಡಿ ನಿಮ್ಮ ಮುಂದೆ ಅವರು ಇದ್ದಾರೆ. ಇಲ್ಲಿ ಯಾರಿಗೆ ಅನ್ಯಾಯ ಆಗಿದೆ ಎಂದು ಗಮನಿಸಿ ಎಂದು ಹೇಳಿದ್ರು.
ನಾವು ಹೆಚ್ಚು ಮಾತನಾಡುವುದಿಲ್ಲ. ವಿರೋಧಿಗಳು ಸುಳ್ಳು ಹಬ್ಬಿಸುತ್ತಿದ್ದಾರೆ. ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ನಾವು ಬಿಜೆಪಿಯನ್ನು ಸೇರಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದರೂ ಅವರನ್ನು ಮಂತ್ರಿ ಮಾಡಿ ಡಿಸಿಎಂ ಮಾಡಿದೆವು. ಆದರೂ ಇಂದು ಅವರು ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.