ಚಿಕ್ಕೋಡಿ:ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕಾಂಗ್ರೆಸ್ ಸೇರುತ್ತಿದ್ದಂತೆ ಅಥಣಿಯಲ್ಲಿ ರಮೇಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಪೀಡೆ ಹೋಗಿದೆ. ನನಗೆ ಇವತ್ತು ತುಂಬಾ ಸಂತೋಷವಾಗಿದೆ ಎಂದು ಗುಡುಗಿದರು. ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಿದ್ದವರನ್ನು ಪಕ್ಷ ಡಿಸಿಎಂ ಮಾಡಿತ್ತು. ಆದರೆ ಅವನು ಪಕ್ಷ ನಿಷ್ಠೆ ತೋರಲಿಲ್ಲ. ಇವತ್ತು ನಮ್ಮನ್ನು ಬಿಟ್ಟು ಹೋಗಿದ್ದಾನೆ. ನಮಗೆ ಚಲೋ ಆಯ್ತು ಎಂದು ಏಕವಚನದಲ್ಲೇ ಟೀಕಿಸಿದರು.
ರಮೇಶ್ ಜಾರಕಿಹೊಳಿ ಮತ್ತೆ ಕಾಂಗ್ರೆಸ್ ಹೋಗ್ತಾನೆ ಅನ್ನೋದು ಸವದಿ ತಲೆಯಲ್ಲಿತ್ತು. ಆದರೆ ನನಗೆ ಮಂತ್ರಿ ಸ್ಥಾನ ಇಲ್ಲದಿದ್ದರೂ ನಾನು ಪಕ್ಷದಲ್ಲೇ ಇದ್ದೆ. ಇವತ್ತು ನನಗೆ ಸಂತೋಷವಾಗಿದೆ. ಉದ್ದ ಅಂಗಿ ಹಾಕಿರುವವನು ಹೊರ ಹೋಗಿದ್ದಾನೆ ಎಂದರು. ನೀವು ಮಹೇಶ್ ಕುಮಠಳ್ಳಿ ಅವರನ್ನು ಗೆಲ್ಲಿಸಬೇಕು. ಒಂದೂವರೆ ವರ್ಷ ಸವದಿ ಮಂತ್ರಿ ಇದ್ದರು. ಅಥಣಿ ಅಭಿವೃದ್ಧಿಗೆ ಏನೂ ಮಾಡ್ಲಿಲ್ಲ ಎಂದು ಆರೋಪಿಸಿದರು.
ವಿಶೇಷ ವಿಮಾನದಲ್ಲಿ ಡಿಕೆಶಿ ಸವದಿ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಕುತಂತ್ರಿ ಡಿ.ಕೆ.ಶಿವಕುಮಾರ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು ಅಥಣಿಯಲ್ಲೇ ಇರುತ್ತೇನೆ. ಅಥಣಿ ಜೊತೆಗೆ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಇರುತ್ತೇನೆ. ನೀವು ನನಗೆ ಶಕ್ತಿ ಆಗಬೇಕು. ಲಕ್ಷ್ಮಣ್ ಸವದಿ ಸೋಲಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.