ಬೆಳಗಾವಿ:ರಾಜ್ಯದಲ್ಲಿ ಮಳೆ ಹೆಚ್ಚಳ ಕುರಿತಂತೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ನಾಳೆ ಬೆಳಗಾವಿಯಲ್ಲಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಪ್ರವಾಹ ಎದುರಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.
ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾದ್ರೆ ಅಗತ್ಯ ಕ್ರಮ: ಸಚಿವ ರಮೇಶ ಜಾರಕಿಹೊಳಿ - ಕುಂದಾನಗರಿಯಲ್ಲಿ ಮಳೆ ಹೆಚ್ಚಳ
ಕಲ್ಯಾಣ ಕರ್ನಾಟಕದಲ್ಲಿ ಸತತವಾಗಿ ಮಳೆ ಆಗುತ್ತಿರುವ ಕುರಿತು ವರದಿ ಬಂದಿದೆ. ಸಾರ್ವಜನಿಕರು ಪ್ರವಾಹ ಭೀತಿ ಕಂಡು ಬಂದ್ರೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ಎಚ್ಚರಿಕೆ ವಹಿಸಬೇಕು ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಮಳೆ ಕುರಿತಂತೆ ನಾಳೆ ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದೇನೆ. ಜಿಲ್ಲೆಯಲ್ಲಿ ಪ್ರವಾಹ ಎದುರಾದ್ರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜೊತೆಗೆ ಹುಕ್ಕೇರಿಯಲ್ಲಿ ಆಗಿರುವ ಪ್ರವಾಹದ ಕುರಿತು ಖುದ್ದಾಗಿ ಭೇಟಿ ನೀಡಿ ಹಾನಿಗೊಳಗಾದ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು. ಕಲಬುರಗಿ ಭಾಗ ಸೇರಿದಂತೆ ಇತರ ಕಡೆಗಳಲ್ಲಿ ಹೆಚ್ಚಾಗುತ್ತಿರೋ ಮಳೆಯ ವರದಿ ನೀಡಲು ನಮ್ಮ ಅಧಿಕಾರಿಗಳ ತಂಡವನ್ನು ಅಲ್ಲಿಗೆ ಕಳುಹಿಸಲಾಗಿದೆ. ಎಲ್ಲೆಲ್ಲಿ ಹಾನಿ ಆಗಿದೆ ಎಂಬ ಕುರಿತು ಅಧಿಕಾರಿಗಳ ತಂಡ ವರದಿ ನೀಡಲಿದೆ. ಮಹಾರಾಷ್ಟ್ರದಿಂದ ನೀರು ಬಿಟ್ಟಿಲ್ಲ. ಕಲ್ಲೋಳಿ ಬ್ಯಾರೇಜ್ನಿಂದ 60 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ ಎಂದರು.
ಕೃಷ್ಣಾ ನದಿಯ ಒಳಹರಿವು ಹೆಚ್ಚಾದ್ರೆ ಆಲಮಟ್ಟಿ ಡ್ಯಾಮ್ನಿಂದ ನೀರು ಹೊರಬಿಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಪ್ರವಾಹದಲ್ಲಿ ಸಿಲುಕಿದ ಜನರ ರಕ್ಷಣೆಗೆ ಬೋಟ್ ಸೇರಿದಂತೆ ಅಗತ್ಯ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಪ್ರವಾಹ ಎದುರಿಸಲು ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವ ಜಾರಕಿಹೊಳಿ ತಿಳಿಸಿದರು