ಚಿಕ್ಕೋಡಿ:ಇನ್ನೇನು ಸಾರ್ವತ್ರಿಕ ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳು ಜಿದ್ದಿಗೆ ಬಿದ್ದಿದ್ದ ರೀತಿಯಲ್ಲಿ ತಾ ಮುಂದು ನಾ ಮುಂದು ಎಂದು ಮತದಾರರ ಓಲೈಕೆಗೆ ಹಲವಾರು ಯಾತ್ರೆಗಳನ್ನು ಕೈಗೊಂಡಿವೆ. ಆದರೆ, ರಾಜ್ಯದಲ್ಲೇ ವಿಭಿನ್ನವಾಗಿ ಹಾಗೂ ಪವರ್ ಪಾಯಿಂಟ್ ಎಂದು ಗುರುತಿಸಿಕೊಂಡಿರುವ ಬೆಳಗಾವಿ ಬಿಜೆಪಿ ರಾಜಕಾರಣದಲ್ಲಿ ಸದ್ಯ ಭಿನ್ನಮತ ಸ್ಪೋಟಗೊಂಡಿದ್ದು, ರಾಜಕೀಯ ವಲಯದಲ್ಲಿ ಹಲವಾರು ಚರ್ಚೆಗಳಿಗೆ ಗ್ರಾಸವಾಗಿವೆ.
ಇನ್ನೇನು ಚುನಾವಣೆಗೆ ಕೇವಲ ಒಂದೆರಡು ತಿಂಗಳು ಇರುವಾಗಲೇ, ರಾಜ್ಯದ ರಾಜಕಾರಣ ಗರಿಗೆದರಿದೆ. ಮೂರು ಪಕ್ಷಗಳು ಮತದಾರರ ಓಲೈಕೆಗೆ ಬಾರಿ ಕಸರತ್ತು ನಡೆಸುತ್ತಿವೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಭದ್ರಕೋಟೇಯಾಗಿದೆ. ಈ ಕೋಟೆಯ ವಲಯದಲ್ಲಿ ಅಸಮಾಧಾನದ ಹೊಗೆ ಆಡುತ್ತಿದ್ದು ಮತ್ತಷ್ಟು ಪ್ರತಿಷ್ಠೆ ಕಣವಾಗಿ ಬೆಳಗಾವಿ ರಾಜಕಾರಣ ಬಿಂಬಿತವಾಗುತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಜಾ ದ್ವನಿ ಸಮಾವೇಶ ಬಳಿಕ ಕಳೆದ ಒಂದು ವಾರದಿಂದ ಬಿಜೆಪಿ ಪಕ್ಷದ ಜನ ಸಂಕಲ್ಪ ಯಾತ್ರೆ ನಡೆಸುತ್ತಿದ್ದು, ಇವತ್ತು ಜನ ಸಂಕಲ್ಪ ಯಾತ್ರೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ರಾಯಬಾಗ್ ಹಾಗೂ ನಿಪ್ಪಾಣಿ ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿಯಾಗಿ ಸಮಾವೇಶ ನಡೆಸಲಾಯಿತು.
ಎಲ್ಲವನ್ನೂ ನಾವು ಸರಿದೂಗಿಸಿಕೊಂಡು ಹೋಗುತ್ತೇವೆ - ಬಿಎಸ್ವೈ: ಬಿ ಎಸ್ ಯಡಿಯೂರಪ್ಪ ಇಂದು ವಾಯುಮಾರ್ಗವಾಗಿ ಅಂಕಲಿ ಗ್ರಾಮಕ್ಕೆ ಆಗಮಿಸಿ ಜನ ಸಂಕಲ್ಪ ಯಾತ್ರೆಗೂ ಮೊದಲು ಪತ್ರಿಕಾಗೋಷ್ಠಿ ನಡೆಸಿದರು. ಗೆಲ್ಲುವ ಪಕ್ಷಕ್ಕೆ ನಾ ಮುಂದು ತಾ ಮುಂದು ಎಂಬುದು ಸ್ವಾಭಾವಿಕವಾಗಿರುತ್ತವೆ. ಎಲ್ಲವನ್ನು ನಾವು ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ಹೇಳಿದ ಕೇವಲ ಒಂದೆರಡು ಗಂಟೆಯಲ್ಲಿ ರಮೇಶ ಜಾರಕಿಹೊಳಿ ರಾಯಬಾಗದಲ್ಲಿ ಕಾಣಿಸಿಕೊಂಡರು. ಆದರೆ ಸಚಿವೆ ಶಶಿಕಲಾ ಜೊಲ್ಲೆ ಕ್ಷೇತ್ರ ನಿಪ್ಪಾಣಿಯಲ್ಲಿ ನಡೆದ ಜನ ಸಂಕಲ್ಪ ಯಾತ್ರೆಗೆ ಗೈರಾದರು. ಈ ಮೂಲಕ ಅವರು ಮತ್ತೊಮ್ಮೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇವನ್ನೆಲ್ಲವನ್ನೂ ನಾವು ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.