ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ಬೆಳಗಾವಿ:ಶೀಘ್ರದಲ್ಲೇ ಡಿ.ಕೆ.ಶಿವಕುಮಾರ್ ಮಾಜಿ ಮಂತ್ರಿ ಆಗುತ್ತಾರೆ. ಹೈಕೋರ್ಟ್ನಲ್ಲಿ ಹಿನ್ನಡೆ ಸೇರಿದಂತೆ ಇನ್ನಿತರ ಕಾರಣಗಳಿಂದ ಅವರು ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭವಿಷ್ಯ ನುಡಿದರು.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1 ರೂಪಾಯಿ ತಿಂದವರನ್ನು ಜೈಲಿಗೆ ಹಾಕುತ್ತಾರೆ. ಆದರೆ, ಡಿಕೆಶಿಯದು 40, 100 ಕೋಟಿ ರೂ ಅಕ್ರಮ ಇದೆ. ಐದೇ ವರ್ಷದಲ್ಲಿ ಐದು ಪಟ್ಟು ಆಸ್ತಿ ಹೆಚ್ಚಾದರೆ ಅದು ಎಲ್ಲಿಂದ ಬಂತು ಎಂಬ ಲೆಕ್ಕ ತೋರಿಸಬೇಕಲ್ಲವೇ? ಎಂದರು.
ಆಪರೇಶನ್ ಕಮಲ ಆಗಲು ಸಾಧ್ಯವಿಲ್ಲ. ದೊಡ್ಡ ಸಂಖ್ಯೆಯ ಶಾಸಕರು ಬೇಕಾಗುತ್ತದೆ. ಮಹಾರಾಷ್ಟ್ರ ಮಾದರಿ ಆದರೆ ಮಾತ್ರ ಸರ್ಕಾರ ಪತನವಾಗುತ್ತದೆ. ಹಾಗಾಗಿ, ಸರ್ಕಾರ ಬೀಳಿಸಲು ನಾವು ಆಪರೇಶನ್ ಕಮಲ ಮಾಡುತ್ತಿಲ್ಲ. ಈ ಸರ್ಕಾರ ಉಳಿಯಬೇಕು. ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಕೊಡಬೇಕು ಎಂದು ತಿಳಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ಬಾಕಿ ಬಿಲ್ ಬಿಡುಗಡೆಗೆ ಒತ್ತಾಯಿಸಬೇಕು. ಆ ನಿಟ್ಟಿನಲ್ಲಿ ಅವರಿಗೆ ನಾವು ಸಹಕಾರ ಕೊಡುತ್ತೇವೆ. ಸಿದ್ದರಾಮಯ್ಯ ಒಳ್ಳೆಯ ನಿರ್ಣಯ ತೆಗೆದುಕೊಂಡರೆ ಮಾತ್ರ ಈ ಸರ್ಕಾರ ಉಳಿಯುತ್ತದೆ. ಸಿದ್ದರಾಮಯ್ಯ ಬಿಟ್ಟು ಡಿಕೆಶಿ ಮುಖ್ಯಮಂತ್ರಿ ಆಗಿದ್ದರೆ ಕಥೆನೇ ಬೇರೆ ಆಗುತ್ತಿತ್ತು ಎಂದು ಕುಟುಕಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ನಾಟಕ ಮಂಡಳಿ ಬಿಜೆಪಿ ನಾಯಕರ ಹೆಸರು ಕೆಡಿಸುತ್ತಿದ್ದಾರೆ. 50, 100 ಕೋಟಿ ರೂ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆ ಫೇಲ್ ಆಗಿದೆ. ಜನರ ದಿಕ್ಕು ಬದಲು ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದರು.
ಕರ್ನಾಟಕ ರಾಜ್ಯಕ್ಕೆ ಅಂಬೇಡ್ಕರ್ ಹೆಸರಿಡಿ:ವಿಜಯಪುರ ಜಿಲ್ಲೆಗೆ ಬಸವಣ್ಣನವರ ಹೆಸರಿಡುವ ಚರ್ಚೆ ವಿಚಾರಕ್ಕೆ, ವಾಲ್ಮೀಕಿ, ಬಸವಣ್ಣ, ಚೆನ್ನಮ್ಮ ಸೇರಿ ಮಹನೀಯರನ್ನು ಅವರ ಇತಿಹಾಸದಿಂದ ತಿಳಿದುಕೊಂಡಿದ್ದೇವೆ. ಹಾಗಾಗಿ, ಜೀವಂತ ಇತಿಹಾಸವನ್ನು ನೋಡಿರುವ ಅಂಬೇಡ್ಕರ್ ಹೆಸರನ್ನು ರಾಜ್ಯಕ್ಕಿಡಬೇಕು. ಅಂಬೇಡ್ಕರ್ ಜೀವನ ಸಾಧನೆ ನಮ್ಮ ಕಣ್ಮುಂದಿದೆ. ರಾಜ್ಯಕ್ಕೆ ಬಸವನಾಡು ಎಂದು ಕರೆಯುವುದಕ್ಕಿಂತ ಅಂಬೇಡ್ಕರ್ ನಾಡು ಎಂದು ಕರೆಯುವುದು ಸೂಕ್ತ ಎಂದು ರಮೇಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಆಪರೇಷನ್ ಕಮಲದ ಬಗ್ಗೆ ದೂರು ಕೊಟ್ಟರೆ ತನಿಖೆ ಮಾಡುತ್ತೇವೆ: ಸಚಿವ ಡಾ ಪರಮೇಶ್ವರ್