ಬೆಳಗಾವಿ:ಸತೀಶ್ ಜಾರಕಿಹೊಳಿ ಒಬ್ಬ ಹುಚ್ಚ. ಆತನ ದ್ರೋಹದ ಕಥೆ ಕುರಿತು ನಾನೇನಾದರೂ ಕಥೆ ಮಾಡಿದ್ರೆ ಸತೀಶ್ ಮನೆಗೆ ಓಡಿ ಹೋಗುತ್ತಾನೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸತೀಶ್ ಜಾರಕಿಹೊಳಿ ಗೋಕಾಕ್ ಭ್ರಷ್ಟಾಚಾರದ ಕುರಿತು ಹಾಡು ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರಮೇಶ್, ಜಾರಕಿಹೊಳಿ ಕುಟುಂಬದ ಬಗ್ಗೆ ಅಪಮಾನ ಮಾಡಬಾರದು ಎಂಬ ಕಾರಣಕ್ಕೆ ಸುಮ್ಮನಿದ್ದೇವೆ. ನಾನು ಬಾಲಚಂದ್ರ ಒಂದೇ ವೇದಿಕೆಯಲ್ಲಿ ಬಂದಾಗ ಸತೀಶ್ ಜಾರಕಿಹೊಳಿ ಮಾತಿಗೆ ಉತ್ತರ ಹೇಳುತ್ತೇನೆ. ಸತೀಶ್ ಜಾರಕಿಹೊಳಿ ಮೊದಲೇ ಹುಚ್ಚನಾಗಿ ಓಡಾಡುತ್ತಿದ್ದಾನೆ. ಹೀಗಾಗಿ ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕಿದೆ. ಸತೀಶ್ ಲೀಡರ್ ಅಲ್ಲ, ಅವನೊಬ್ಬ ಷಂಡ ಎಂದು ಹರಿಹಾಯ್ದರು.
ಅನರ್ಹರಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಮೇಶ್ ಬೇಜವಾಬ್ದಾರಿಯಿಂದಲೇ ಲಕ್ಷ್ಮಣ ಸವದಿ ಹಾಳಾಗಿದ್ದಾರೆ. ಇನ್ನೂ ಹಾಳಾಗುತ್ತಾರೆ. ಕತ್ತಿ ಅವರು ಸವದಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ಅದಕ್ಕೆ ನನ್ನ ಸಹಮತ ಇದೆ. ಡಿಸಿಎಂ ಸ್ಥಾನದ ಮಹತ್ವ ಗೊತ್ತಿಲ್ಲ. ಅನರ್ಹ ಶಾಸಕರ ಬಗ್ಗೆ ಮಾತನಾಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸೋತರೂ ಸವದಿಗೆ ಡಿಸಿಎಂ ಸ್ಥಾನ ಸಿಕ್ಕಿದೆ. ಅವರ ಸೊಕ್ಕನ್ನು ಆ ದೇವರೇ ಮುರಿಯುತ್ತಾನೆ. ಹತ್ತು ತಲೆಯ ರಾವಣ ಹಾಳಾಗಿದ್ದಾನೆ, ಈ ಮನುಷ್ಯ ಯಾವ ಲೆಕ್ಕ ಎಂದು ಲಕ್ಷ್ಮಣ್ ಸವದಿ ವಿರುದ್ಧ ಏಕವಚನದಲ್ಲಿ ರಮೇಶ್ ಜಾರಕಿಹೊಳಿ ಹರಿಹಾಯ್ದರು.
ಸುಪ್ರೀಂಕೋರ್ಟ್ ಏನೇ ತೀರ್ಪು ಕೊಟ್ಟರೂ ಚುನಾವಣೆಗೆ ನಿಲ್ಲಲು ಅವಕಾಶ ಇದೆ ಅಂತ ಕಾನೂನು ತಜ್ಞರು ಹೇಳಿದ್ದಾರೆ. 30 ವರ್ಷದಿಂದ ನಾನು ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮಾಡುತ್ತಿದ್ದೇನೆ. ಯಾವುದೇ ಸಂದರ್ಭ ಬಂದರೂ ನಾನು ಚುನಾವಣೆಗೆ ರೆಡಿ ಇದ್ದೇನೆ. ವಾದ ಪ್ರತಿವಾದ ನೋಡಿದರೆ ಚುನಾವಣೆಗೆ ನಿಲ್ಲುವ ಅವಕಾಶ ಸಿಗುವ ಸಾಧ್ಯತೆ ಇದೆ ಎಂದರು.
ಕುಮಾರಸ್ವಾಮಿ ನಾನು ಜತೆಗೆ ಪ್ರಯಾಣ ಮಾಡಿರುವುದು ದೊಡ್ಡ ವಿಷಯವಲ್ಲ, ಅದರಲ್ಲಿ ವಿಶೇಷತೆ ಇಲ್ಲ. ರಾಜಕೀಯವಾಗಿ ಏನೂ ಚರ್ಚೆ ಆಗಿಲ್ಲ. ಖಾಸಗಿ ಮಾತುಕತೆ ಮಾಡಿದ್ದೇವೆ. ಯಾವುದೇ ಪಕ್ಷದಲ್ಲಿದ್ದರೂ ಕುಮಾರಸ್ವಾಮಿ ಜತೆಗೆ ಒಳ್ಳೆ ಸಂಬಂಧ ಇದೆ. ದೇವೆಗೌಡರ ಕುಟುಂಬದ ಜತೆಗೆ ಮೊದಲಿನಿಂದಲೂ ನಮ್ಮ ಸಂಬಂಧ ಚೆನ್ನಾಗಿದೆ ಎಂದು ಸಮಜಾಯಿಷಿಯನ್ನೂ ನೀಡಿದರು.