ಬೆಳಗಾವಿ: ಯಡಿಯೂರಪ್ಪ ಅವರನ್ನು ಸಿಎಂ ಮಾಡಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಷರತ್ತು ಹಾಕಿಯೇ ನಾವೆಲ್ಲರೂ ಬಿಜೆಪಿಗೆ ಸೇರಿದ್ದೇವೆ ಎಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ನಡೆದ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ನಮ್ಮೆಲ್ಲರನ್ನು ಬಿಡದಿ ರೆಸಾರ್ಟ್ಗೆ ಕರೆದೊಯ್ಯಲಾಗಿತ್ತು. ಇಲ್ಲಿ ಡಿ.ಕೆ. ಶಿವಕುಮಾರ ಅಣತಿಯಂತೆ ಎಲ್ಲರೂ ವರ್ತಿಸುವ ಸ್ಥಿತಿ ಇತ್ತು. ಇದನ್ನು ಸಹಿಸಿಕೊಳ್ಳಲು ನನಗಾಗಲಿಲ್ಲ. ಮೈತ್ರಿ ಸರ್ಕಾರ ರಚನೆಯಾದ ಮೊದಲ ದಿನವೇ ಸರ್ಕಾರ ಉರುಳಿಸುವ ಶಪಥ ಮಾಡಿದ್ದೆ. ಆಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದೆ. ಬಳಿಕ ಯಡಿಯೂರಪ್ಪ ಅವರು ಹೈದ್ರಾಬಾದ್ನಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿಸಿದ್ರು. ಆಗ ಯಡಿಯೂರಪ್ಪ ಅವರನ್ನು ಸಿಎಂ ಮಾಡಿದ್ರೆ, ಬಿಜೆಪಿ ಸೇರಬೇಕೆನ್ನುವ ನಮ್ಮ ಷರತ್ತಿಗೆ ಅಮಿತ್ ಶಾ ಒಪ್ಪಿಗೆ ಸೂಚಿಸಿದ್ದರು. ಆನಂತರ ಹಲವು ಪ್ರಯತ್ನದ ಬಳಿಕ ಆಪರೇಷನ್ ಕಮಲ ಸಕ್ಸಸ್ ಆಯಿತು ಎಂದರು.
ಕಾಂಗ್ರೆಸ್ ಪಕ್ಷದ ದುರಂಹಕಾರ ಮನೋಭಾವನೆ, ಡಿಕೆಶಿ ಭ್ರಷ್ಟಾಚಾರ ಹಾಗೂ ಸಿದ್ದರಾಮಯ್ಯ ಅವರ ದುರಾಡಳಿತವೇ ಮೈತ್ರಿ ಸರ್ಕಾರ ಪತನಕ್ಕೆ ಮುಖ್ಯ ಕಾರಣವಾಯಿತು. ಹೀಗಾಗಿ ನಾವು ಅನಿವಾರ್ಯವಾಗಿ ಬಿಜೆಪಿಗೆ ಹೋಗಬೇಕಾಯಿತು. 2018ರ ವಿಧಾನಸಭೆ ರಿಸಲ್ಟ್ ಬಂದ ಕೂಡಲೇ ಗೆದ್ದ ಎಲ್ಲರೂ ಬೆಂಗಳೂರಿಗೆ ಹೋಗಿದ್ದರು. ಸಿದ್ದರಾಮಯ್ಯ ನಂಬಿ ನಾವೆಲ್ಲ ರಾಜಕಾರಣ ಮಾಡುತ್ತಿದ್ದೆವು. ಆದರೆ, ಸಿದ್ದರಾಮಯ್ಯ ಅಂದು ಸೈಡ್‌ಲೈನ್ ಆಗಿದ್ದರು. ಅಂದು ಡಿ ಕೆ ಶಿವಕುಮಾರ್ ಕೈಯಲ್ಲಿ ಕಾಂಗ್ರೆಸ್ ಇತ್ತು. ಇದನ್ನು ನೋಡಿಯೇ ಮೇ 15ರಂದು ಸರ್ಕಾರ ಕೆಡವಲು ತೀರ್ಮಾನ ಮಾಡಿದೆವು ಎಂದು ಆಪರೇಷನ್ ಕಮಲದ ಸೀಕ್ರೆಟ್ ರಿವಿಲ್ ಮಾಡಿದರು.