ಚಿಕ್ಕೋಡಿ : ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮಣ್ ಸವದಿ ನಡುವೆ ವಾಕ್ಸಮರ ಮುಂದುವರೆದಿದೆ. ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಪರ ಕಾಗವಾಡ ತಾಲೂಕಿನ ಅನಂತಪುರದಲ್ಲಿ ರಮೇಶ್ ಜಾರಕಿಹೊಳಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಅಥಣಿ ಜನ ಒಳಗಿಂದೊಳಗೆ ತಯಾರಾಗಿ ಕುಳಿತಿದ್ದಾರೆ. ಸವದಿ ದುಡ್ಡು ಕೊಟ್ಟರೆ ತೆಗೆದುಕೊಳ್ಳಿ, ದುಡ್ಡು ಅವಂದಲ್ಲ, ಅದು ನಮ್ಮದು. ನಾವು ಸರ್ಕಾರ ತಂದಿದ್ದರಿಂದ ಆತ ಮಂತ್ರಿಯಾದ. ಅವನಲ್ಲಿರೋದು ನಮ್ಮ ದುಡ್ಡು. ಆ ದುಡ್ಡು ತಗೊಂಡು ಬಿಜೆಪಿಗೆ ಮತ ನೀಡಿ. ಕಡೆ ಘಳಿಗೆಯಲ್ಲಿ ಸವದಿಗೆ ಸ್ವಾಭಿಮಾನ ಕಾಡ್ತಿದೆಯಂತೆ. ಎರಡು ವರ್ಷ ಆತ ಆರಾಮಾಗಿದ್ದ. ಚುನಾವಣೆ ಘೋಷಣೆಯಾದ ಬಳಿಕ ಇದೀಗ ಸ್ವಾಭಿಮಾನ ಕಾಡ್ತಿದೆ" ಎಂದು ಏಕವಚನದಲ್ಲೇ ಟೀಕಾಸಮರ ನಡೆಸಿದರು.
"ಗಂಡಸಾಗಿದ್ರೆ ಅದು ಶ್ರೀಮಂತ ಪಾಟೀಲ್. ಮಹೇಶ ಕುಮಟಳ್ಳಿ, ರಮೇಶ್ ಜಾರಕಿಹೊಳಿ ತಂದ ಸರ್ಕಾರದಲ್ಲಿ ಮಂತ್ರಿ ಆಗೋಲ್ಲ ಅಂತ ಸವದಿ ಹೇಳ್ಬೇಕಿತ್ತು. ಮುಂದೆ ಆರಿಸಿ ಬಂದು ಮಂತ್ರಿ ಆಗ್ತೀನಿ ಅಂದಿದ್ರೆ ಅವನಿಗೆ ಗಂಡ್ಸು ಅಂತ ಅಂತಿದ್ವಿ. ಆದರೆ ಸವದಿ ಓಡಿಹೋಗಿ ಮಂತ್ರಿಯಾದ. ಕೊನೆಗೆ ಚುನಾವಣೆ ಘೋಷಣೆಯಾದ ಬಳಿಕ ಅವನಿಗೆ ಸ್ವಾಭಿಮಾನ ಕಾಡಿತು. ಇಂತಹ ಬೋಗಸ್ ಸ್ವಾಭಿಮಾನ ಸವದಿಯದ್ದು" ಎಂದು ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.