ಬೆಳಗಾವಿ:ಸೋನಿಯಾ ಗಾಂಧಿ ಅವರನ್ನು ಬ್ಲಾಕ್ ಮೇಲ್ ಮಾಡಿ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷನಾಗಿದ್ದಾನೆ ಎಂದು ಏಕವಚನದಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. ನಿನ್ನೆಯಷ್ಟೇ ಮಾಧ್ಯಮಗೋಷ್ಟಿ ನಡೆಸಿ ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ರಮೇಶ್ ಜಾರಕಿಹೊಳಿ ಇಂದು ಕೂಡ ಹರಿಹಾಯ್ದಿದ್ದಾರೆ.
"ಡಿಕೆಶಿಯನ್ನು ಭೇಟಿಯಾಗಲು ತಿಹಾರ ಜೈಲಿಗೆ ಸೋನಿಯಾ ಗಾಂಧಿ ಅವರು ಹೋದಾಗ ಬ್ಲಾಕ್ ಮೇಲ್ ಮಾಡಿದ್ದಾನೆ. ನನ್ನ ಅಧ್ಯಕ್ಷ ಮಾಡದಿದ್ದರೆ ಇಡಿ ಅಧಿಕಾರಿಗಳಿಗೆ ನಿಮ್ಮ ಹೆಸರನ್ನು ಹೇಳುತ್ತೇನೆ ಎಂದು ಹೆದರಿಸಿದ್ದ. ಟಿವಿ ಅವರು ಸೇರಿದಂತೆ ಆತ ಎಲ್ಲರನ್ನೂ ಬ್ಲಾಕ್ ಮೇಲ್ ಮಾಡುತ್ತಾನೆ. ರಾತ್ರಿ ಹೊತ್ತು ಒಬ್ಬನೆ ಓಡಾಡುವಾಗ ನನ್ನ ಕೊಲ್ಲುವುದಕ್ಕೂ ಡಿಕೆಶಿ ಹೇಸುವುದಿಲ್ಲ. ಮೊದಲೇ ಅವನು ಕೊತ್ವಾಲ್ ರಾಮಚಂದ್ರನ ಶಿಷ್ಯ" ಎಂದು ರಮೇಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.
"ಡಿಕೆಶಿ ಬಹಳ ವೀಕ್ ಮನುಷ್ಯ, ಕೇವಲ ಬ್ಲ್ಯಾಕ್ ಮೇಲ್ ಮಾಡೋದೇ ಅವನ ಕೆಲಸ. ಸಿಡಿ ಕೇಸ್ ಸಿಬಿಐಗೆ ವಹಿಸದಿದ್ದರೆ ಹೈಕೋರ್ಟ್ ಇಲ್ಲವೇ ಸುಪ್ರೀಂಕೋರ್ಟಗೆ ಹೋಗುತ್ತೇನೆ. ಹಾಗಾಗಿ, ಸಿಎಂ ಮತ್ತು ಗೃಹ ಸಚಿವರು ಎಚ್ಚೆತ್ತುಕೊಂಡು ಕೂಡಲೇ ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಿದರೆ, ಇಡೀ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಬಹಳಷ್ಟು ಮಂದಿಯ ಸಿಡಿ ಅವನ ಬಳಿ ಇವೆ. ಸಿಬಿಐಗೆ ವಹಿಸಿದರೆ ಇದೆಲ್ಲಾ ಅಂತ್ಯವಾಗುತ್ತದೆ. ಒಂದು ವೇಳೆ ಇದೇ ಪುನರಾವರ್ತನೆ ಆದರೆ ದೊಡ್ಡ ಪ್ರಮಾಣದ ಪ್ರತಿಭಟನೆ ಮಾಡಿ, ಈ ಸರ್ಕಾರವನ್ನು ತೆಗೆದು ಹಾಕಬೇಕಾಗುತ್ತದೆ. ಈ ಸಂಬಂಧ ಪಕ್ಷದ ಹೈಕಮಾಂಡ್ ಜೊತೆಗೆ ಮಾತಾಡಿದ್ದೇನೆ" ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಬೆಂಗಳೂರಿನಲ್ಲಿ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಅಶ್ಲೀಲ ಫೋಟೋ ಅಂಟಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿನ್ನೆ ರಾತ್ರಿ ಸನ್ಮಾನ್ಯ ಡಿಕೆ ಶಿವಕುಮಾರ್ ಗೂಂಡಾಗಳನ್ನು ಕಳಿಸಿ ಮನೆಗೆ ಅಶ್ಲೀಲ ಫೋಟೋ ಹಚ್ಚಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಅಲ್ಲ ಅವರು, ಡಿಕೆಶಿಯ ಗೂಂಡಾಗಳು. ಸಿಡಿ ಪ್ರಕರಣದಲ್ಲಿ ನನಗೆ ಅಪಮಾನ ಮಾಡಿದಾಗ ನಾನು ಏನ್ ಬೇಕಾದರೂ ಮಾಡಬಹುದಿತ್ತು ಎಂದು ಕಿಡಿಕಾರಿದರು.
ಜತೆಗೆ ಕೊತ್ವಾಲ್ ರಾಮಚಂದ್ರನ ಶಿಷ್ಯ ಇಂದು ಈ ರೀತಿ ಮಾಡಿದ್ದಾರೆ. ಈ ಸಂಬಂಧ ಗೋಕಾಕ್ ನಲ್ಲಿ ಕೇಸ್ ದಾಖಲು ಮಾಡಿದ್ದೇನೆ. ಕೇಸ್ ಬೆಂಗಳೂರಿಗೆ ವರ್ಗಾವಣೆ ಮಾಡಲು ಕಾನೂನು ಹೋರಾಟ ಮಾಡುತ್ತೇನೆ. ಸದಾಶಿವ ನಗರದ ಕೇಸ್ನ್ನೂ ಸಿಬಿಐ ವಹಿಸುವಂತೆ ಗೃಹ ಸಚಿವರು ಮತ್ತು ಡಿಐಜಿಗೆ ಪತ್ರ ಬರೆಯುತ್ತೇನೆ. ಇನ್ನು ಸಿಡಿಯಲ್ಲಿ ಡಿಕೆ ಶಿವಕುಮಾರ್ ನೇರವಾಗಿ ಪಾತ್ರ ಇದೆ. ಇಲ್ಲವಾದಲ್ಲಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ರಮೇಶ್ ಜಾರಕಿಹೊಳಿ ಮುಗಿಸಿದ್ದೇನೆ ಎಂದು ಹೇಳಿದ ಆಡಿಯೋ ಕೂಡ ಇದೆ. ಸಿಬಿಐ ತನಿಖೆ ಆದ್ರೆ ಎಲ್ಲಾ ದಾಖಲೆ ಕೊಡುತ್ತೇನೆ ಎಂದರು.
ರವಿ ಗಣಿಗರ ಜೊತೆ, ನನಗೂ ಜೀವ ಬೆದರಿಕೆ ಇದೆ ಎಂದು ಮುಂದಿನ ವಾರ ಅಮಿತ್ ಶಾ ಅವರನ್ನು ಭೇಟಿಯಾಗಿ ದೂರು ನೀಡುವೆ ಎಂದರು. ಮುಂದುವರೆದು, ಇನ್ನು ಆಪರೇಷನ್ ಕಮಲ ಸಾಧ್ಯವೇ ಇಲ್ಲ. ಆದರೆ ಮಹಾರಾಷ್ಟ್ರ ಮಾದರಿಯಲ್ಲಿ ಆಗಬೇಕು. ಡಿಕೆಶಿ, ಸಿದ್ದರಾಮಯ್ಯ ಇಲ್ಲವೇ ಮತ್ಯಾರಾದ್ರು ಬಂಡಾಯ ಏಳಬೇಕು. ಒಂದು ತಂಡ ರಚನೆಯಾಗಿ ಹೊರ ಬಂದರೆ ಮಾತ್ರ ಸರ್ಕಾರ ಬೀಳಲಿದೆ ಎಂದರು. ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ, ಡಿಕೆಶಿ ಕಾಲಿಗೆ ಬಿದ್ದಿದ್ದರು ಎಂಬ ವಿಚಾರಕ್ಕೆ ನಾನು ಜೀವನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಟ್ಟು ಮತ್ತೆ ಯಾರ ಕಾಲಿಗೂ ಬಿದ್ದಿಲ್ಲ. ಕಾಲು ಬಿದ್ದ ಬಗ್ಗೆ ಸಾಕ್ಷಿ ಕೊಟ್ಟರೆ ಸಾರ್ವಜನಿಕವಾಗಿ ರುಂಡ ಕತ್ತರಿಸಿಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.
ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಆಟ ಈ ಸಾರಿ ನಡೆಯಲ್ಲ, ಎಲ್ಲ ಶಾಸಕರೂ ಒಗ್ಗಟ್ಟಾಗಿದ್ದೇವೆ: ಶಾಸಕ ಶಿವಗಂಗಾ ಬಸವರಾಜ್