ಬೆಳಗಾವಿ: ರಾಸಲೀಲೆ ಸಿಡಿ ಜಾಲದಿಂದ ಪಾರಾಗಲು ಮುಂಬೈ ಯಾತ್ರೆ ಕೈಗೊಂಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ನಾಲ್ಕು ದಿನಗಳ ಕಾಲ ಮುಂಬೈನಲ್ಲಿ ಬೀಡುಬಿಟ್ಟಿದ್ದ ರಮೇಶ್ ಜಾರಕಿಹೊಳಿ ಎರಡು ಸಲ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದರು.
ಸಿಡಿ ಪ್ರಕರಣದಲ್ಲಿ ರಾಜ್ಯದ ನಾಯಕರು ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಫಡ್ನವಿಸ್ ಎದುರು ರಮೇಶ್ ಅಳಲು ತೋಡಿಕೊಂಡಿದ್ದರು. ಸಿಡಿ ಪ್ರಕರಣದಿಂದ ಪಾರಾಗಲು ಸಹಾಯ ಮಾಡಬೇಕೆಂದು ಅವರ ಬಳಿ ರಮೇಶ್ ಮನವಿ ಮಾಡಿದ್ದಾರೆ. ಫಡ್ನವಿಸ್ ಕೂಡ ರಮೇಶ್ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೂಲಗಳು ಈಟಿವಿ ಭಾರತಕ್ಕೆ ಖಚಿತಪಡಿಸಿವೆ.
ರಮೇಶ್ ಜಾರಕಿಹೊಳಿಗೆ ಫಡ್ನವಿಸ್ ಅಭಯವೇನು?
ಮೈತ್ರಿ ಸರ್ಕಾರದ ಪತನದ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ನ ಅತೃಪ್ತ ಶಾಸಕರು ಮುಂಬೈನಲ್ಲಿ ತಂಗಿದ್ದರು. ಆಗ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರ ಸಿಎಂ ಆಗಿದ್ದರು. ಅತೃಪ್ತ ಶಾಸಕರ ವಾಸ್ತವ್ಯಕ್ಕೆ ಫಡ್ನವಿಸ್ ಮುಂಬೈನಲ್ಲಿ ವ್ಯವಸ್ಥೆ ಕಲ್ಪಿಸಿದ್ದರು. ಅಲ್ಲದೇ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅಸ್ತಿತ್ವದಲ್ಲಿ ಫಡ್ನವಿಸ್ ಪಾತ್ರವೂ ಮುಖ್ಯವಾಗಿತ್ತು. ಈ ಕಾರಣಕ್ಕೆ ರಮೇಶ್ ಉಪಚುನಾವಣೆಯಲ್ಲಿ ಗೆದ್ದು ಸಚಿವರಾದಾಗ ಮುಂಬೈ, ದೆಹಲಿಯಲ್ಲಿ ಫಡ್ನವಿಸ್ ಅವರನ್ನು ಪದೇ ಪದೆ ಭೇಟಿಯಾಗುತ್ತಿದ್ದರು.