ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಉಪಚುನಾವಣೆಯಲ್ಲಿ ಬಿಜೆಪಿಗೆ ವಿರುದ್ಧ ಆಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದಿಂದ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಆಗಲಿದೆ. ಈ ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ನಾವು ಈ ವಿಷಯವನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲ್ಲ ಎಂದರು.
ಎಸ್ಐಟಿ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಸಿಡಿ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಇದಕ್ಕಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಬೇಕೆಂದು ನಾವು ಆಗ್ರಹಿಸಿದ್ದೇವೆ. ಸರ್ಕಾರ ಮಾತ್ರ ಎಸ್ಐಟಿಯಿಂದಲೇ ತನಿಖೆ ನಡೆಸುತ್ತಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಓದಿ: ಅತ್ಯಂತ ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ: ಸಿದ್ದರಾಮಯ್ಯ, ಡಿಕೆಶಿ ಸಾಥ್
ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸ್ಟ್ಯಾಂಡ್ ಇಲ್ಲ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬಸ್ ಸ್ಟ್ಯಾಂಡ್ ಆಗಿರೋರು ಯಾರಪ್ಪ, ಮಿಸ್ಟರ್ ನರೇಂದ್ರ ಮೋದಿ ಅಲ್ಲವೇ. ಪ್ರಹ್ಲಾದ್ ಜೋಶಿ ಒಬ್ಬ ಸೈಡ್ ಆ್ಯಕ್ಟರ್ ಅಷ್ಟೇ. ಆರ್‌ಎಸ್‌ಎಸ್ ಅವರ ಡೈರೆಕ್ಟರ್ ಅಷ್ಟೇ. ಬೆಲೆ ಏರಿಕೆ, ರೈತ ವಿರೋಧಿ ಕಾನೂನುಗಳು ಕೇಂದ್ರ ಸರ್ಕಾರದ ವೈಫಲ್ಯಗಳು, ಬೆಲೆ ಏರಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ. ಅಚ್ಛೆ ದಿನ್ ಇಲ್ಲ, ಜನರಿಗೆ ನರಕ ಆಗಿಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಯಾವುದೇ ಜಾತಿಗೆ ಸೀಮಿತವಾದ ಪಾರ್ಟಿ ಅಲ್ಲ. ಎಲ್ಲಾ ಜಾತಿಗಳನ್ನು ಒಟ್ಟಿಗೆ ತಗೆದುಕೊಂಡು ಹೋಗುವ ಪಕ್ಷ. ಸತೀಶ್ ಜಾರಕಿಹೊಳಿ ಬಹಳ ಒಳ್ಳೆಯ, ಸಮರ್ಥ ಅಭ್ಯರ್ಥಿ ಎಂದರು.