ಕರ್ನಾಟಕ

karnataka

ETV Bharat / state

ಇನ್ನೆರಡು ತಿಂಗಳಿನಲ್ಲಿ ಸರ್ಕಾರಿ ಬಸ್, ಸಿಬ್ಬಂದಿ ಕೊರತೆ ಸಮಸ್ಯೆ ಇತ್ಯರ್ಥ: ರಾಮಲಿಂಗಾರೆಡ್ಡಿ

ಬಸ್​ ನಿಲ್ಧಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಸೌಕರ್ಯಗಳನ್ನು ಹೆಚ್ಚಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.

ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ

By ETV Bharat Karnataka Team

Published : Dec 13, 2023, 6:41 PM IST

ಬೆಳಗಾವಿ/ ಬೆಂಗಳೂರು : 2024ರ ಫೆಬ್ರವರಿ ಅಂತ್ಯದ ವೇಳೆಗೆ ಹೊಸ ಬಸ್​ಗಳ ಸೇರ್ಪಡೆ, ಸಿಬ್ಬಂದಿ ನೇಮಕಾತಿ ಕಾರ್ಯ ಅಂತಿಮಗೊಳ್ಳಲಿದ್ದು, ಬಸ್​ಗಳ ಕೊರತೆ ಬಹುತೇಕ ಕಡಿಮೆಯಾಗಲಿದೆ. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಸೌಕರ್ಯಗಳನ್ನು ಹೆಚ್ಚಿಸಲಾಗುತ್ತದೆ. ಕೋವಿಡ್ ವೇಳೆ ರದ್ದಾಗಿದ್ದ ಶೆಡ್ಯೂಲ್​ಗಳನ್ನೂ ಮರಳಿ ಆರಂಭಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಕ್ತಿ ಯೋಜನೆ ಜಾರಿಯಾದ ನಂತರ ರಾಜ್ಯದಲ್ಲಿ 80 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ 1 ಕೋಟಿಗೆ ತಲುಪಿದೆ. ಆದರೆ, ಅದಕ್ಕೆ ತಕ್ಕಂತೆ ಬಸ್ ಗಳು ಇಲ್ಲ. ಹಿಂದೆ ನಾನೇ ಸಾರಿಗೆ ಸಚಿವ ಆಗಿದ್ದಾಗ ರಾಜ್ಯದ ನಾಲ್ಕೂ ನಿಗಮಗಳಿಂದ 24 ಸಾವಿರ ಬಸ್ ಇತ್ತು. ಆದರೆ ಈಗ ಅದು 23 ಸಾವಿರಕ್ಕೆ ಇಳಿದಿದೆ. ಹೊಸದಾಗಿ ಬಸ್ ಖರೀದಿಯೇ ಮಾಡಿಲ್ಲ. ನೇಮಕಾತಿ ವಿಚಾರದಲ್ಲಿಯೂ ಪ್ರಗತಿ ಆಗಿಲ್ಲ. 13,888 ಜನ ನಿವೃತ್ತಿಯಾಗಿದ್ದರೂ ನೇಮಕಾತಿ ಆಗಿಲ್ಲ. ಈಗ ನಾವು 9 ಸಾವಿರ ಸಿಬ್ಬಂದಿ ನೇಮಕ ಮಾಡುತ್ತಿದ್ದೇವೆ ಎಂದರು.

5500 ಹೊಸ ಬಸ್ ಸೇರ್ಪಡೆ ಮಾಡುತ್ತಿದ್ದೇವೆ. ಫೆಬ್ರವರಿ ಕೊನೆಗೆ ಹೊಸ ಬಸ್ ಹಾಗೂ ಸಿಬ್ಬಂದಿ ಎರಡೂ ಬರಲಿವೆ. ಕೋವಿಡ್ ವೇಳೆ 3800 ಬಸ್ ರದ್ದು ಮಾಡಿದ್ದೆವು. ಈಗ ಅದೆನ್ನೆಲ್ಲ ಫೆಬ್ರವರಿ ಕೊನೆಗೆ ಮರಳಿ ಆರಂಭಿಸಲಾಗುತ್ತದೆ. ಕ್ಯಾನ್ಸಲ್ ಆಗಿದ್ದ ಶೆಡ್ಯೂಲ್ ಮರಳಿ ಆರಂಭಿಸುತ್ತೇವೆ. ಬಸ್ ನಿಲ್ದಾಣಗಳಲ್ಲಿ ಸೌಕರ್ಯಗಳನ್ನು ಮಾಡಲಾಗುತ್ತದೆ. ಬಹುತೇಕ ಬಸ್ ನಿಲ್ದಾಣಗಳು ಅಪ್​ಡೇಟ್ ಆಗಿವೆ. ಶೌಚಾಲಯ ಸರಿಪಡಿಸಲಾಗುತ್ತದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಎಲ್ಲ ಸವಲತ್ತು ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.

ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಬಸ್ ಹೆಚ್ಚಳ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಸಗಿ ಬಸ್​ಗಳ ಸಂಖ್ಯೆ ಹೆಚ್ಚಾಗಿದೆ. ಸರ್ಕಾರಿ ಬಸ್​ಗಳ ಸಂಖ್ಯೆಯನ್ನೂ ಹೆಚ್ಚಿಸಲು ಕ್ರಮ ವಹಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಶಶಿಲ್ ನಮೋಶಿ ಪ್ರಶ್ನೆಗೆ ಉತ್ತರಿಸಿದ ಸಚಿವರು, 2003ರಲ್ಲಿ 13 ಸಾವಿರ ಬಸ್ ಇತ್ತು. 2013ರಲ್ಲಿ 24 ಸಾವಿರ ಆಯಿತು. 2023ರಲ್ಲಿ 23 ಸಾವಿರ ಇದೆ. 10 ವರ್ಷ ಮೊದಲು ಇದ್ದದ್ದಕ್ಕಿಂತ 1 ಸಾವಿರ ಕಡಿಮೆ ಇದೆ. ನಮ್ಮ ಜನಸಂಖ್ಯೆಗೆ ಹೋಲಿಸಿದಲ್ಲಿ 35 ಸಾವಿರ ಬಸ್ ಇರಬೇಕಿತ್ತು. ಆದರೆ ಬಸ್ ಕಡಿಮೆಯಾಗಿದೆ ಎಂದರು.

ಹಂತ ಹಂತವಾಗಿ ಸುಧಾರಣೆಯಾಗಲಿದೆ :4 ವರ್ಷ ಸತತವಾಗಿ ಬಸ್ ಖರೀದಿ ಮಾಡಿಲ್ಲ. ಸಿಬ್ಬಂದಿ ನೇಮಕಾತಿಯೂ ಆಗಲಿಲ್ಲ. ಶಕ್ತಿ ಯೋಜನೆಯಿಂದ ನಮ್ಮ ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ 15-20 ಲಕ್ಷ ಜನರ ಸಂಖ್ಯೆ ಹೆಚ್ಚಾಗಿದೆ. ಫೆಬ್ರವರಿ ಕೊನೆ ವೇಳೆಗೆ 5500 ಬಸ್ ಬರಲಿದೆ. ಸಿಬ್ಬಂದಿ ನೇಮಕಾತಿಯೂ 2016ರಲ್ಲಿ ಆಗಿತ್ತು. ಈಗ 9 ಸಾವಿರ ಸಿಬ್ಬಂದಿ ನೇಮಕಾತಿ ಮಾಡಲಿದ್ದೇವೆ. ಜನವರಿಗೆ ಮೆಕ್ಯಾನಿಕ್​ಗಳು ಬರಲಿದ್ದಾರೆ. ಫೆಬ್ರವರಿಗೆ ಕಂಡಕ್ಟರ್ ಕಂ ಡ್ರೈವರ್ ಬರಲಿದ್ದಾರೆ. ನಂತರ ಈ ಪರಿಸ್ಥಿತಿ ಸುಧಾರಣೆಯಾಗಲಿದೆ. 3800 ಬಸ್ ರದ್ದು ಮಾಡಿದ್ದೆವು. ಅದನ್ನೂ ಆರಂಭಿಸಲಾಗುತ್ತದೆ. ಹಿಂದಿನ ರೀತಿ ಸೇವೆ ಇರಲಿದೆ. ಇನ್ನೂ 10-12 ಸಾವಿರ ಬಸ್ ಬೇಕು. ಹಂತ ಹಂತವಾಗಿ ಎಲ್ಲ ಸುಧಾರಣೆಯಾಗಲಿದೆ ಎಂದರು.

ಶೈಕ್ಷಣಿಕ ಪ್ರವಾಸಕ್ಕೆ ಬಸ್ ಸಮಸ್ಯೆ ಆಗುವುದಿಲ್ಲ: ಕಲ್ಯಾಣ ಕರ್ನಾಟಕಕ್ಕೆ ಎಸಿ ಬಸ್​ಗಳ ಸಂಖ್ಯೆ ಕಡಿಮೆ ಇದೆ. ಅದನ್ನು ಹೆಚ್ಚಿಸಲಾಗುತ್ತದೆ. ಅಲ್ಲದೆ ಆ ಭಾಗದಲ್ಲಿ ಖಾಸಗಿ ಬಸ್ ಸೇವೆ ಹೆಚ್ಚಿವೆ. ಅಲ್ಲಿಯೂ ಸರ್ಕಾರಿ ಬಸ್​ಗಳನ್ನೂ ಹೆಚ್ಚಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು. ಇದೇ ವೇಳೆ ಶೈಕ್ಷಣಿಕ ಪ್ರವಾಸಕ್ಕೆ ಬಸ್ ಕೊಡಿ ಎಂದು ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇವೆ. ಹಾಗಾಗಿ ಶೈಕ್ಷಣಿಕ ಪ್ರವಾಸಕ್ಕೆ ಬಸ್ ಸಮಸ್ಯೆ ಆಗುವುದಿಲ್ಲ ಎಂದರು.

ಪರವಾನಗಿ ಪಡೆದ ಮಾರ್ಗದಲ್ಲೇ ಖಾಸಗಿ ಬಸ್ ಸಂಚಾರಕ್ಕೆ ಕ್ರಮ: ಯಾವ ಮಾರ್ಗದ ಮೂಲಕ ಅಂತಾರಾಜ್ಯ ಸೇವೆಗೆ ಪರವಾನಗಿ ಪಡೆದುಕೊಂಡಿರುತ್ತಾರೋ, ಅದೇ ಮಾರ್ಗದ ಮೂಲಕ ಖಾಸಗಿ ಬಸ್​ಗಳು ಸಂಚರಿಸುವ ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್​ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಎಂ. ಎಲ್ ಅನಿಲ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗ್ರಾಮಾಂತರ ಮಾರ್ಗಗಳ ಮೂಲಕ ಸಂಚಾರ ಮಾಡುವುದಾಗಿ ಅಂತಾರಾಜ್ಯ ಪರವಾನಗಿ ಪಡೆದು ಗ್ರಾಮಗಳ ಮಾರ್ಗದಲ್ಲಿ ಖಾಸಗಿ ಬಸ್​ಗಳು ಹೋಗುವುದೇ ಇಲ್ಲ ಎನ್ನುವುದು ಸರ್ಕಾರದ ಗಮನಕ್ಕೆ ಬಂದಿದೆ. ಪರವಾನಗಿ ಪಡೆದ ಮಾರ್ಗದಲ್ಲೇ ಖಾಸಗಿ ಬಸ್​ಗಳು ಸಂಚರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

3800 ಶೆಡ್ಯೂಲ್ ಕೋವಿಡ್ ವೇಳೆ ಕಡಿಮೆ ಮಾಡಲಾಗಿತ್ತು. ಈಗ ಕೋವಿಡ್ ಹೋಗಿದೆ. ಆದರೆ ಬಸ್ ಖರೀದಿ ಮಾಡದಿರುವುದು ಸಿಬ್ಬಂದಿ ನೇಮಕ ಮಾಡಿರುವುದರಿಂದ ಸಮಸ್ಯೆ ಇತ್ತು. ಶಕ್ತಿ ಯೋಜನೆಯಿಂದ ಹೆಚ್ಚಿನ ಬೇಡಿಕೆ ಇದೆ. ಶಾಲಾ ಕಾಲೇಜು ಮಕ್ಕಳಿಗೂ ತೊಂದರೆಯಾಗುತ್ತಿದೆ. ಫೆಬ್ರವರಿ ಅಂತ್ಯದ ವೇಳೆಗೆ ಎಲ್ಲವನ್ನೂ ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಇವಿ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಗೆ ಕಾರ್ಯಕ್ರಮ: ರಾಜ್ಯದಲ್ಲಿ ಇವಿ ವಾಹನಗಳ ಉತ್ತೇಜನದ ಜೊತೆಗೆ ಅಗತ್ಯ ಪ್ರಮಾಣದಲ್ಲಿ ಹೆದ್ದಾರಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಆರಂಭಕ್ಕೆ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇವಿ ವಲಯದ ಕೈಗಾರಿಕೆಗಳ ಅಭಿವೃದ್ಧಿ ದೃಷ್ಟಿಯಿಂದ ಇವಿ ಪಾಲಿಸಿ ತರಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಪಾಲಿಸಿ ತರಲಾಗಿದೆ. ಡೀಸೆಲ್ ಪೆಟ್ರೋಲ್ ವಾಹನಗಳಿಂದ ಮಾಲಿನ್ಯ ಹೆಚ್ಚಾಗಿದೆ. ಹಾಗಾಗಿ ಕೆಂದ್ರ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಡೀಸೆಲ್ ವಾಹನ ಕಡಿಮೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಇನ್ನು 25-30 ವರ್ಷದಲ್ಲಿ ಡೀಸೆಲ್ ವಾಹನ ಇಲ್ಲದೇ ಹೋಗಬಹುದು. ಸದ್ಯ ಈಗ ಇವಿ ವಾಹನ ಬಂದಿವೆ. ಭವಿಷ್ಯದಲ್ಲಿ ಹೈಡ್ರೋಜನ್ ವಾಹನ ಬರಬಹುದು. ನಗರ ಪ್ರದೇಶದಲ್ಲಿ ಹೆಚ್ಚು ವಾಹನ ಇದೆ. ಹಾಗಾಗಿ ಇಲ್ಲಿ ಇವಿ ಪ್ರಮೋಟ್ ಮಾಡುತ್ತಿದ್ದಾರೆ. ಬೆಂಗಳೂರಿನ ನಂತರ ಈಗ ಪಿಎಂ ಇ ಬಸ್ ಮೈಸೂರು, ಮಂಗಳೂರು, ದಾವಣಗೆರೆ, ಶಿವಮೊಗ್ಗ ತುಮಕೂರು ನಗರಗಳಿಗೆ ಒಟ್ಟು 350, ವಾಯುವ್ಯ ಕರ್ನಾಟಕ ಭಾಗದಲ್ಲಿ 210 ಮತ್ತು ಕಲ್ಯಾಣ ಕರ್ನಾಟಕಕ್ಕೂ ಕೂಡ ಬರಲಿದೆ ಎಂದರು.

ರಾಜ್ಯದಲ್ಲಿ ಇವಿ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇವಿ ಕಾರು ಬಸ್​ಗಳೂ ಬರುತ್ತಿವೆ. ಇದಕ್ಕೆ ತಕ್ಕಂತೆ ಚಾರ್ಜಿಂಗ್ ಸ್ಟೇಷನ್​ಗಳ ನಿರ್ಮಾಣ ಅಗತ್ಯವಿದೆ. ಹೆದ್ದಾರಿಗಳು, ಜಿಲ್ಲಾ ಕೇಂದ್ರಗಳಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್​ಗಳನ್ನು ಆರಂಭಿಸಬೇಕಿದೆ. ಇದಕ್ಕಾಗಿ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ :ಹಳದಿ ಎಲೆ ಹಾಗೂ ಎಲೆ ಚುಕ್ಕೆ ರೋಗ ನಿವಾರಣೆಗೆ ಸೂಕ್ತ ಕ್ರಮ: ಕೃಷಿ ಸಚಿವ ಚಲುವರಾಯಸ್ವಾಮಿ

ABOUT THE AUTHOR

...view details