ಕರ್ನಾಟಕ

karnataka

ರಂಜಾನ್ ಸಂಭ್ರಮ: ವಿದ್ಯುತ್ ದೀಪಗಳಿಂದ ಝಗಮಗಿಸಿದ ಕುಂದಾನಗರಿ ಮಾರ್ಕೆಟ್

By

Published : Apr 22, 2023, 7:38 AM IST

Updated : Apr 22, 2023, 10:45 AM IST

ರಂಜಾನ್ ಹಬ್ಬದ ನಿಮಿತ್ತ ಬೆಳಗಾವಿಯ ಮಾರುಕಟ್ಟೆ ವಿದ್ಯುತ್​ ದೀಪಗಳಿಂದ ಅಲಂಕರಿಸಲಾಗಿದ್ದು, ವಿದೇಶಗಳಿಂದ ವಿವಿಧ ಬಗೆಯ ಖಾದ್ಯಗಳು ಮಾರುಕಟ್ಟೆಗೆ ಆಗಮಿಸಿವೆ.

ರಂಜಾನ್ ಹಬ್ಬ
ರಂಜಾನ್ ಹಬ್ಬ

ವಿದ್ಯುತ್ ದೀಪಗಳಿಂದ ಝಗಮಗಿಸಿದ ಕುಂದಾನಗರಿ ಮಾರ್ಕೆಟ್

ಬೆಳಗಾವಿ: ಇಸ್ಲಾಂ ಧರ್ಮಿಯರ ಪವಿತ್ರ ರಂಜಾನ್ ಹಬ್ಬಕ್ಕೆ ಕುಂದಾನಗರಿ ಬೆಳಗಾವಿಯ ಮಾರುಕಟ್ಟೆ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ಸಂಭ್ರಮ ಸಡಗರ ಮನೆ ಮಾಡಿದ್ದು, ಖಡೇಬಜಾರ ಬೀದಿ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ. ಒಂದು ತಿಂಗಳು ಪರ್ಯಂತ ಕಟ್ಟಾ ಉಪವಾಸ ವ್ರತ ರೋಜಾ ಕೈಗೊಂಡಿರುವ ಮುಸ್ಲಿಂ‌ ಧರ್ಮಿಯರ ಈದ್ ಉಲ್ ಫಿತರ್ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇನ್ನೂ ಹಬ್ಬಕ್ಕೆ ತಿಂಡಿ, ತಿನಿಸು, ಬಟ್ಟೆ ಸೇರಿ ಇನ್ನಿತರ ಸಾಮಗ್ರಿಗಳ ಖರೀದಿ ಭರ್ಜರಿಯಾಗಿ ನಡೆದಿದೆ.

ರಂಜಾನ್ ಶುರುವಾಗುತ್ತಿದ್ದಂತೆ ಬೆಳಗಾವಿಯ ಪ್ರಮುಖ ಮಾರುಕಟ್ಟೆ ಪ್ರದೇಶ ಖಡೇಬಜಾರ್​ನಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯಿತು. ಅಲ್ಲದೇ ರಸ್ತೆಯ ಎರಡೂ ಬದಿ ವಿದ್ಯುತ್ ದೀಪಗಳಿಂದ ಅಲಂಕೃತ ಮಾಡಲಾಗಿದ್ದು, ಈ ದೃಶ್ಯ ವೈಭವವನ್ನು ನೋಡುವುದೇ ಕಣ್ಣಿಗೆ ಹಬ್ಬ. ಖರ್ಜೂರ ಮತ್ತು ಒಣಹಣ್ಣುಗಳಿಗೆ(ಡ್ರೈಫ್ರೂಟ್ಸ್‌) ಹೆಚ್ಚಿನ ಬೇಡಿಕೆ ಇರುವುದು ಕಂಡುಬಮತು. ಕೊರೊನಾ ಆತಂಕದಿಂದಾಗಿ ಕಳೆದೆರಡು ವರ್ಷ ಮಂಕಾಗಿದ್ದ ಹಬ್ಬದ ಸಂಭ್ರಮ, ಈ ಬಾರಿ ದುಪ್ಪಟ್ಟಾಗಿದೆ.

ಖಡೇಬಜಾರ್‌, ದರ್ಬಾರ್​ಗಲ್ಲಿ, ಖಂಜರ್‌ ಗಲ್ಲಿ ಹಾಗೂ ಕೆಲ ಬಡಾವಣೆಗಳು ವಿದ್ಯುತ್‌ ದೀಪಗಳ ಅಲಂಕಾರದಿಂದ ಝಗಮಗಿಸುತ್ತಿವೆ. ವಿವಿಧ ವಸ್ತುಗಳ ಖರೀದಿಗಾಗಿ ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ‌ ಸಂಖ್ಯೆಯಲ್ಲಿ ಜನ‌ ಆಗಮಿಸಿದ್ದರು.

ನಾನಾ ಬಗೆಯ ಖರ್ಜೂರ:ರಂಜಾನ್‌ ಅಂಗವಾಗಿ ಮುಸ್ಲಿಮರು ಒಂದು ತಿಂಗಳು ಉಪವಾಸ ವ್ರತ(ರೋಜಾ) ಕೈಗೊಳ್ಳುತ್ತಾರೆ. ಪ್ರವಾದಿ ಮುಹಮ್ಮದ್‌ ಪೈಗಂಬರ್‌ ಅವರು ಇಫ್ತಾರ್‌ ವೇಳೆ, ಖರ್ಜೂರ ಸೇವಿಸಿ ರೋಜಾ ಮುಕ್ತಾಯಗೊಳಿಸುತ್ತಿದ್ದರು. ಹಾಗಾಗಿ ಮಸೀದಿಗಳು ಹಾಗೂ ಮನೆಗಳಲ್ಲಿ ಸಂಜೆ ಆಯೋಜನೆಗೊಳ್ಳುತ್ತಿರುವ ಇಫ್ತಾರ್‌ ಕೂಟಗಳಲ್ಲಿ ಖರ್ಜೂರಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ. ಬೆಳಗಾವಿ ಮಾರುಕಟ್ಟೆಗೆ ಸೌದಿ ಅರೇಬಿಯಾದಿಂದ ಕಲ್ಮಿ, ಸುಲ್ತಾನ್‌, ಕಿಮಿಯಾ, ಅಝ್ವಾ, ಫರ್ದ್‌, ಅಮೀರ್‌, ಹರ್ಮನಿ, ಜನ್ನತ್‌, ಡೋಬ್ರಾ ಸೇರಿ 25ಕ್ಕೂ ಅಧಿಕ ಬಗೆಯ ಖರ್ಜೂರ ಬಂದಿವೆ. ಪ್ರತಿ ಕೆ.ಜಿ.ಗೆ ಸರಾಸರಿ 100 ರೂ. ರಿಂದ ಹಿಡಿದು 2,000 ರೂ. ವರೆಗೆ ಬೆಲೆಯಿದೆ. ವ್ಯಾಪಾರ ಚೆನ್ನಾಗಿದೆ ಎಂದು ಖಡೇಬಜಾರ್‌ ವ್ಯಾಪಾರಿ ಮುದಸ್ಸರ್‌ ಮುಜಾವರ ಈಟಿವಿ ಭಾರತ ಜೊತೆ ಮಾತನಾಡಿ ತಿಳಿಸಿದರು.

ಅಫ್ಘಾನಿಸ್ತಾನ್‌, ಇರಾನ್‌ ಡ್ರೈಫ್ರೂಟ್ಸ್:ಅಫ್ಘಾನಿಸ್ತಾನ್‌, ಇರಾನ್‌ ಮತ್ತಿತರ ರಾಷ್ಟ್ರಗಳಿಂದ ಒಣಹಣ್ಣುಗಳು ಬಂದಿವೆ. ಎರಡು ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ವಹಿವಾಟು ಉತ್ತಮವಾಗಿದೆ. ಜನರು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ರಂಜಾನ್‌ ಮಾಸದ ಕೊನೆಯ ವಾರ ನಿತ್ಯ ಸಂಜೆಯಿಂದ ನಸುಕಿನ ಜಾವದವರೆಗೂ ಖರೀದಿ ಭರಾಟೆ ನಡೆಯುತ್ತದೆ. ಇನ್ನು ರಂಜಾನ್‌ ಹಬ್ಬದಂದು ಮುಸ್ಲಿಮರು ತಮ್ಮ ಮನೆಗಳಲ್ಲಿ ತಯಾರಿಸುವ ಶೀರ್‌ಖುರ್ಮಾಗೆ ಬೇಕಾಗುವ ಶಾವಿಗೆ ಉತ್ಪನ್ನಗಳು ಹೈದರಾಬಾದ್‌ನಿಂದ ಮಾರುಕಟ್ಟೆ ಪ್ರವೇಶಿಸಿವೆ.

ಕೆ.ಜಿ.ಗೆ ಸರಾಸರಿ 70 ರೂ. ಯಿಂದ 200 ರೂ.ವರೆಗಿನ 4 ಬಗೆಯ ಶಾವಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ಅಲ್ಲದೆ, ಗೋಡಂಬಿ, ಬಾದಾಮಿ, ಪಿಸ್ತಾ, ಅಖ್ರೋಟ್‌, ಚಾರೂಲಿ, ಅಂಜೀರ್‌, ಒಣದ್ರಾಕ್ಷಿ ಸೇರಿದಂತೆ ಹಲವು ಬಗೆಯ ಒಣಹಣ್ಣುಗಳನ್ನು ಜನ ಹೆಚ್ಚಾಗಿ ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಿ ಮುದಸ್ಸರ್‌ ತಿಳಿಸಿದ್ದಾರೆ. ದರ್ಬಾರ್​ಗಲ್ಲಿ, ಖಂಜರ್‌ ಗಲ್ಲಿ, ಕೇಂದ್ರ ಬಸ್‌ ನಿಲ್ದಾಣ ಸೇರಿ ಮತ್ತಿತರ ಕಡೆಗಳ ಬಳಿ ತಲೆ ಎತ್ತಿರುವ ಅಂಗಡಿಗಳಲ್ಲಿ ಸಿದ್ಧಪಡಿಸಲಾಗುತ್ತಿರುವ ಮಾಂಸಾಹಾರಿ ಖಾದ್ಯಗಳ ರುಚಿ ಸವಿಯಲು ಜನ ಮುಗಿ ಬೀಳುತ್ತಿದ್ದಾರೆ. ರಂಜಾನ್ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ಭರ್ಜರಿ ವ್ಯಾಪಾರ ನಡೆದಿದೆ.

ಇದನ್ನೂ ಓದಿ:ಚಾರ್ಧಾಮ್​ ಯಾತ್ರೆ 2023: ಉಖಿಮಠದಿಂದ ಕೇದಾರನಾಥ ದೇವಸ್ಥಾನಕ್ಕೆ ಡೋಲಿ ಯಾತ್ರೆ

Last Updated : Apr 22, 2023, 10:45 AM IST

ABOUT THE AUTHOR

...view details