ಅಥಣಿ:ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ ಹಿನ್ನೆಲೆ ಅಥಣಿ ತಾಲೂಕಿನಾದ್ಯಂತ ರಾಮನ ಭಕ್ತರು ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ತಾಲೂಕಿನಲ್ಲಿ ಸತ್ತಿ, ಕೊಟ್ಟಲಗಿ, ಕಕಮರಿ, ಝುಂಜರವಾಡ, ಕೊಕಟನೂರ, ನದಿ ಇಂಗಳಗಾಂವ, ಹುಗಬಾಳಗಿ, ಸಪ್ತಸಾಗರ, ದರೂರ, ಹಲ್ಯಾಳ, ಕೋಹಳ್ಳಿ.. ಹೀಗೆ ಹಲವಾರು ಗ್ರಾಮಗಳಲ್ಲಿ ರಾಮ ಮಂದಿರ ಶಿಲಾನ್ಯಾಸ ಸಂಭ್ರಮದ ಆಚರಣೆ ಮಾಡಲಾಯಿತು.
ಅಯೋಧ್ಯೆ ಕರ ಸೇವಕ ಬಸವರಾಜ ದಳವಾಯಿ ಮಾತನಾಡಿ, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಹಿಂದೂ ಧರ್ಮದವರಿಗೆ ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಅದಕ್ಕಾಗಿ ನಡೆದ ಹೋರಾಟ, ರಥಯಾತ್ರೆ, ಇಟ್ಟಿಗೆ ಸಂಗ್ರಹಗಳಿಗೆ ಅಥಣಿ ತಾಲೂಕಿನಿಂದ ಏಳು ಮಂದಿ ಕರ ಸೇವಕರಾಗಿ ಅಯೋಧ್ಯೆಗೆ ಹೋಗಿದ್ದರು. ಅದರಲ್ಲೂ ಸತ್ತಿ ಗ್ರಾಮದಿಂದ ಮೂವರು ಹೋಗಿದ್ದರು ಎಂದು ಸ್ಮರಿಸಿದರು.
ಮಂದಿರ ಸಲುವಾಗಿ ಹಲವಾರು ವರ್ಷಗಳ ಹೋರಾಟದಲ್ಲಿ ಹಲವರು ಹುತಾತ್ಮರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗುವ ದಿನ. ನಮ್ಮಂತಹ ರಾಮ ಭಕ್ತರಿಗೆ ಸುಯೋಗ ಭಾಗ್ಯದ ದಿನವೆಂದು ಅತಿ ಭಕ್ತಿ ಪರಾಕಾಷ್ಠೆಯಿಂದ ಈ ದಿನವನ್ನು ಹಬ್ಬದಂತೆ ಆಚರಣೆ ಮಾಡುತ್ತೇವೆ ಎಂದರು.